ಮಡಿಕೇರಿ, ಮೇ ೧೭: ರೋಟರಿ ಸಂಸ್ಥೆಯು ಹಲವು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದು, ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ರೋಟರಿ ಜಿಲ್ಲೆ ೩೧೮೧ರ ರಾಜ್ಯಪಾಲ ರವೀಂದ್ರ ಭಟ್ ಹೇಳಿದರು. ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪೋಲಿಯೋ ನಿರ್ಮೂಲನೆಯ ಗುರಿಯೊಂದಿಗೆ ರೋಟರಿ ಸಂಸ್ಥೆ ಆರಂಭಿಸಿದ ‘ಪಲ್ಸ್ ಪೋಲಿಯೋ’ ಕಾರ್ಯಕ್ರಮದಿಂದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನೈಜೀರಿಯಾ ದೇಶವನ್ನು ಹೊರತು ಪಡಿಸಿ ಇತರ ಎಲ್ಲಾ ದೇಶಗಳು ಪೋಲಿಯೋದಿಂದ ಮುಕ್ತವಾಗಿವೆ.
ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ, ಗುಡ್ಡ ಕುಸಿತದ ಸಂದರ್ಭ ನೆಲೆ ಕಳೆದುಕೊಂಡ ೫೦ ಮಂದಿಗೆ ಮನೆಗಳನ್ನು ರೋಟರಿ ಸಂಸ್ಥೆ ನಿರ್ಮಿಸಿಕೊಟ್ಟಿದೆ. ರೋಟರಿ ಸಂಸ್ಥೆ ಶಿಕ್ಷಣಕ್ಕೆ ಒತ್ತು ನೀಡಿ, ಕನ್ನಡ ಮಾಧ್ಯಮದ ಮಕ್ಕಳ ಪರೀಕ್ಷೆಗೆ ಅನುಕೂಲವಾಗುವಂತೆ ಹೊರತಂದ ‘ವಿದ್ಯಾಸೇತು’ ಪುಸ್ತಕ ಮಕ್ಕಳಿಗೆ ನೆರವಾಗಿದೆ. ಈ ಪುಸ್ತಕದಲ್ಲಿ ಸೂಚಿಸಿದ ಪ್ರಶ್ನಾವಳಿಗಳಲ್ಲಿ ಶೇ.೯೨ ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದಿದ್ದು, ವಿದ್ಯಾಸೇತುವಿನ ಪ್ರಯೋಜನ ಪಡೆದ ಮಕ್ಕಳು ಪರೀಕ್ಷೆಯಲ್ಲಿ ಯಶಸ್ಸನ್ನು ಕಂಡಿದ್ದಾರೆ ಎಂದು ತಿಳಿಸಿದರು.
ಕೊರೊನಾ ಸಂದರ್ಭ ಅಂತ್ಯ ಸಂಸ್ಕಾರಕ್ಕೆ ರುದ್ರಭೂಮಿಗಳ ಕೊರತೆ ಎದುರಾಗಿತ್ತು. ಇದನ್ನು ಮನಗಂಡ ರೋಟರಿ ರುದ್ರಭೂಮಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿತ್ತು. ಇದರ ಭಾಗವಾಗಿ ಕೊಡಗಿನಲ್ಲಿ ೬ ರುದ್ರ ಭೂಮಿಗಳನ್ನು ಅಭಿವೃದ್ಧಿ ಪಡಿಸ ಲಾಗಿದೆ ಎಂದು ಮಾಹಿತಿಯಿತ್ತರು.
ಶಿಕ್ಷಣ ವ್ಯವಸ್ಥೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಜಿಲ್ಲೆಯ ಸಾಕಷ್ಟು ಶಾಲೆಗಳಿಗೆ ರೋಟರಿಯಿಂದ ಅಗತ್ಯವಾದ ಬೆಂಚು, ಪುಸ್ತಕ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ರವೀಂದ್ರ ಭಟ್ ವಿವರಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ರೋಟರಿ ರಾಜ್ಯಪಾಲರ ಭೇಟಿಯ ಸಂದರ್ಭ ನಗರದ ಸುದರ್ಶನ ಪಾರ್ಕ್ ಬಳಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮತ್ತು ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸುವ ನಾಮಫಲಕವನ್ನು ಉದ್ಘಾಟಿಸಲಾಗಿದೆ. ಹಾಗೇ ಹೊಸ ಬಡಾವಣೆಯ ಅಂಗನವಾಡಿಗೆ ರಾಜ್ಯಪಾಲರೊಂದಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಸ್ಟೀಲ್ ತಟ್ಟೆ, ಲೋಟ, ಬೋರ್ಡ್ಗಳನ್ನು, ಆಟಿಕೆ ಸಾಮಗ್ರಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ರಕ್ತದಾನ ಶಿಬಿರ, ಲಸಿಕಾ ಶಿಬಿರ, ಸೀಳು ತುಟಿ ಚಿಕಿತ್ಸಾ ಶಿಬಿರ, ವಿದ್ಯಾ ಸೇತು ಯೋಜನೆಯ ಪುಸ್ತಕಗಳ ವಿತರಣೆ ಸೇರಿದಂತೆ ಹಲವಾರು ಸೇವಾ ಕಾರ್ಯಗಳನ್ನು ನಡೆಸಿರುವುದಾಗಿ ಹೇಳಿದರು. ಗೋಷ್ಠಿಯಲ್ಲಿ ರೋಟರಿ ಉಪ ರಾಜ್ಯಪಾಲ ಅನಿಲ್ ಎಚ್.ಟಿ., ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ರಾಜೇಶ್, ಸಹ ಕಾರ್ಯದರ್ಶಿ ವಸಂತ ಕುಮಾರ್, ವಲಯ ಸೇನಾನಿ ಜಗದೀಶ್, ಪ್ರಶಾಂತ್ ಉಪಸ್ಥಿತರಿದ್ದರು.