ಸಿದ್ದಾಪುರ, ಮೇ ೧೪: ಆನೆ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕೈಗೊಂಡಿರುವ ನಿಯಂತ್ರಣ ಕ್ರಮಗಳನ್ನು ಕಾಡಾನೆಗಳು ಲೆಕ್ಕಿಸದೆ ಇರುವ ಪ್ರಸಂಗಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ. ಸೋಲಾರ್ ಬೇಲಿಗೆ ಮರ ಎಸೆದು ಹಾನಿ ಮಾಡುವುದು, ರೈಲ್ವೆ ಕಂಬಿಯನ್ನು ದಾಟಿ ತೋಟಗಳಿಗೆ ಲಗ್ಗೆ ಇಡುವ ಹಲವಾರು ಪ್ರಸಂಗಗಳು ಜಿಲ್ಲೆಯಲ್ಲಿ ನಡೆದಿವೆ. ಈ ಮಧ್ಯೆ ಇದೀಗ ಕಾಡಾನೆಯೊಂದು ರೈಲ್ವೆ ಕಂಬಿಯ ಕೆಳಗಿನಿಂದಲೂ ಹೊರಳಾಡಿ ದಾಟಿ ಬಂದ ಸನ್ನಿವೇಶವೂ ಜಿಲ್ಲೆಯಲ್ಲಿ ವರದಿಯಾಗಿವೆ.

ವಾಲ್ನೂರು - ತ್ಯಾಗತ್ತೂರು, ಅಭ್ಯತ್‌ಮಂಗಲ, ನೆಲ್ಲಿಹುದಿಕೇರಿ ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಾ, ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ. ಮಿತಿ ಮೀರಿದ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೆಕರೆ ಬರಡಿಯ ಮೂಲಕ ವಾಲ್ನೂರು - ತ್ಯಾಗತ್ತೂರು ಗ್ರಾಮದ ಮುಖಾಂತರ ದುಬಾರೆ ಸಮೀಪದವರೆಗೆ ರೂ. ೨ ಕೋಟಿಗೂ ಅಧಿಕ ವೆಚ್ಚದಲ್ಲಿ ಸರ್ಕಾರದ ವತಿಯಿಂದ ಬ್ಯಾರಿಕೇಡ್ ಅಳವಡಿಸ ಲಾಗಿದೆ. ಆದರೆ, ಕೆಲವು ಕಾಡಾನೆಗಳು ಬ್ಯಾರಿಕೇಡ್ ಅನ್ನು ದಾಟಿ ಕಾಫಿ ತೋಟಗಳಿಗೆ ಲಗ್ಗೆ ಇಡಲು ಪ್ರಯತ್ನಿಸುತ್ತಿವೆ. ಅಲ್ಲದೆ, ಸಲಗಗಳು ತಮ್ಮ ದಂತಗಳಿAದ ಬ್ಯಾರಿಕೇಡ್‌ಗಳ ಮೇಲೆ ದಾಳಿ ನಡೆಸಿ ಮುರಿಯಲು ಪ್ರಯತ್ನಿಸಿದ ಘಟನೆಗಳೂ ಕೂಡ ಈ ಹಿಂದೆ ನಡೆದಿತ್ತು ಎನ್ನಲಾಗಿದೆ. ಆದರೆ, ಶನಿವಾರದಂದು ಬೆಳಿಗ್ಗೆ ತ್ಯಾಗತ್ತೂರಿನ ಸುರೇಶ್ ಎಂಬವರ ಕಾಫಿ ತೋಟದಿಂದ ಹೊರ ಬರುವ ಸಂದರ್ಭದಲ್ಲಿ ಅಂದಾಜು ೨೫ ವರ್ಷ ಪ್ರಾಯದ ಒಂಟಿ ಸಲಗವೊಂದು ರೈಲ್ವೆ ಬ್ಯಾರಿಕೇಡ್‌ನ್ನು ಮುರಿದು ಹೊರಬರಲು ಪ್ರಯತ್ನಿಸಿದೆ. ಇದು ಸಾಧ್ಯವಾಗದ ಸಂದರ್ಭ ರೈಲ್ವೆ ಬ್ಯಾರಿಕೇಡ್‌ನ ಕೆಳ ಭಾಗದಲ್ಲಿ ನುಸುಳಲು ಯತ್ನಿಸಿ ಬ್ಯಾರಿಕೇಡ್‌ನ ಅಡಿಯಲ್ಲಿ ಸಿಲುಕಿಕೊಂಡಿದೆ. ನಂತರ ಹೊರಬರಲು ಹರಸಾಹಸಪಟ್ಟ ಸಲಗವು ಬಸವಳಿದಿದೆ. ಕೊನೆಗೆ ಗ್ರಾಮಸ್ಥರನ್ನು ಕಂಡು ಮತ್ತಷ್ಟು ಗಾಬರಿ ಯಿಂದ ಕೊನೆಗೂ ಬ್ಯಾರಿಕೇಡ್‌ನ ಕೆಳಭಾಗದಿಂದ ಹೊರಬಂದು ನಿಟ್ಟುಸಿರುಬಿಟ್ಟಿದೆ. ಬಳಿಕ ಕಾಫಿ ತೋಟದೊಳಗೆ ಸೇರಿಕೊಂಡಿದೆ.

-ವಾಸು ಎ.ಎನ್.