ಸೋಮವಾರಪೇಟೆ, ಮೇ ೧೪: ಕಳೆದ ತಾ. ೧೨ ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ನಿನ್ನೆ ದಿನ ಮೃತಪಟ್ಟ ಸಜ್ಜಳ್ಳಿ ಗ್ರಾಮ ನಿವಾಸಿ, ಸಿಆರ್‌ಪಿಎಫ್ ಯೋಧ ಕೆ.ಬಿ. ಡಾಲು (೩೫) ಅವರ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಮೈಸೂರಿನಿಂದ ಆಗಮಿಸಿದ ಮೃತದೇಹವನ್ನು ಯಡವನಾಡು ಬಳಿಯಿಂದ ಮೆರವಣಿಗೆ ಮೂಲಕ ಸಜ್ಜಳ್ಳಿ ಗ್ರಾಮಕ್ಕೆ ತರಲಾಯಿತು. ಐಗೂರು ಹಾಗೂ ಹೊಸತೋಟದ ಆಟೋ ಚಾಲಕರು ತಮ್ಮ ಆಟೋಗಳಲ್ಲಿ
(ಮೊದಲ ಪುಟದಿಂದ) ಮೆರವಣಿಗೆ ಮೂಲಕ ತೆರಳಿದರು. ಬೆಂಗಳೂರಿನಿAದ ಆಗಮಿಸಿದ್ದ ಸಿಆರ್‌ಪಿಎಫ್‌ನ ಅಧಿಕಾರಿಗಳು ಹಾಗೂ ಜಿಲ್ಲಾ ಸಶಸ್ತç ಮೀಸಲು ಪಡೆಯ ಸಿಬ್ಬಂದಿಗಳು ಸರ್ಕಾರಿ ಗೌರವ ಸಲ್ಲಿಸಿದರು. ಮೀಸಲು ಪಡೆಯ ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿದರು. ಕುಟುಂಬದ ಧಾರ್ಮಿಕ ವಿಧಿ ವಿಧಾನಗಳ ನಂತರ ಅಂತ್ಯಕ್ರಿಯೆ ನಡೆಸಲಾಯಿತು.
ಶಾಸಕ ಅಪ್ಪಚ್ಚುರಂಜನ್ ಅವರು ಮೃತರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕುಟುಂಬಸ್ಥರು ಹಾಗೂ ಬಂಧುಗಳ ಆಕ್ರಂದನದ ನಡುವೆ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಡಾಲು ಅಗ್ನಿಯಲ್ಲಿ ಲೀನಗೊಂಡರು. ವಿದ್ಯಾಭ್ಯಾಸ ಮುಗಿಸಿ ಐಗೂರಿನಲ್ಲಿ ಆಟೋ ಓಡಿಸಿಕೊಂಡಿದ್ದ ಡಾಲು ಅವರು ಕಳೆದ ೧೪ ವರ್ಷಗಳ ಹಿಂದೆ ಸಿಆರ್‌ಪಿಎಫ್‌ಗೆ ಸೇರ್ಪಡೆಗೊಂಡರು. ಪ್ರಸ್ತುತ ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದು, ಕಳೆದ ತಾ. ೧೦ ರಂದು ರಜೆಯ ಮೇಲೆ ಊರಿಗೆ ಬಂದಿದ್ದರು.
ತಾ. ೧೨ ರಂದು ಸೋಮವಾರಪೇಟೆ ಪಟ್ಟಣಕ್ಕೆ ಬಂದು ಬ್ಯಾಂಕ್ ವ್ಯವಹಾರ ಮುಗಿಸಿ, ಸ್ಕೂಟರ್‌ನಲ್ಲಿ ವಾಪಸ್ ಮನೆಗೆ ತೆರಳುತ್ತಿದ್ದ ಸಂದರ್ಭ ನಗರೂರು ಗ್ರಾಮದ ಮಾರುತಿ ಶೋ ರೂಂ ಮುಂಭಾಗ ಅಪಘಾತ ಸಂಭವಿಸಿತ್ತು.
ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಡಾಲು ಅವರು, ಹೆಲ್ಮೆಟ್ ಧರಿಸದ ಕಾರಣ ತಲೆಯ ಹಿಂಭಾಗಕ್ಕೆ ಬಲವಾದ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮೈಸೂರಿಗೆ ಕರೆದೊಯ್ಯಲಾಗಿತ್ತು.
ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗೋಪಾಲಗೌಡ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಯಡವಾರೆ ಗ್ರಾಮದ ಕಲ್ಲುಗದ್ದೆ ಮನೆ ದಿ.ಬಾಲಕೃಷ್ಣ ಹಾಗೂ ನಾಗವೇಣಿ ಅವರ ಓರ್ವನೇ ಪುತ್ರನಾಗಿದ್ದ ಡಾಲು, ಕಳೆದ ೮ ವರ್ಷಗಳ ಹಿಂದೆ ರಾಜೇಶ್ವರಿ ಅವರನ್ನು ವಿವಾಹವಾಗಿದ್ದರು. ಇವರ ಮೊದಲನೇ ಪುತ್ರಿ ರಕ್ಷಾ ೨ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎರಡನೇ ಪುತ್ರಿ ದಕ್ಷಾಗೆ ಏರಡೂವರೆ ವರ್ಷವಾಗಿದೆ.
ಬಡ ಕೃಷಿಕ ಕುಟುಂಬದ ಇವರಿಗೆ ಯಡವಾರೆ ಗ್ರಾಮದಲ್ಲಿ ಮುಕ್ಕಾಲು ಎಕರೆ ಕೃಷಿ ಭೂಮಿಯಿದೆ. ಇವರ ಈರ್ವರು ಸಹೋದರಿಯರು ವಿವಾಹವಾಗಿದ್ದಾರೆ. ತಾಯಿ, ಪತ್ನಿ ರಾಜೇಶ್ವರಿ, ಮತ್ತು ಈರ್ವರು ಪುತ್ರಿಯರೊಂದಿಗೆ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಡಾಲು ಅವರು, ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದು, ಕುಟುಂಬಸ್ಥರ ಗೋಳು ಹೇಳತ್ತೀರದ್ದಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಡಾಲು ಅವರ ತಂದೆ ಬಾಲಕೃಷ್ಣ ಅವರು ಕಳೆದ ೨ ವರ್ಷಗಳ ಹಿಂದಷ್ಟೇ ಕೋವಿಯಿಂದ ಗುಂಡು ಹೊಡೆದು ಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದರು. ಈ ಘಟನೆಯ ನಂತರ ಕುಟುಂಬದ ಸಂಪೂರ್ಣ ಜವಾಬ್ದಾರಿ ಡಾಲು ಅವರ ಹೆಗಲ ಮೇಲೇರಿತ್ತು. ಕಳೆದ ಒಂದೂವರೆ ವರ್ಷದ ಹಿಂದಷ್ಟೇ ನೂತನ ಮನೆಯನ್ನು ನಿರ್ಮಿಸಿ, ಅದರಲ್ಲಿ ವಾಸವಾಗಿದ್ದರು.
ಪ್ರಥಮ ಪುತ್ರಿಯನ್ನು ಶಾಲೆಗೆ ಕಳುಹಿಸಲು ಅನುಕೂಲವಾಗಲೆಂದು ಕಳೆದ ವರ್ಷವಷ್ಟೇ ಪತ್ನಿ ರಾಜೇಶ್ವರಿ ಅವರಿಗೆ ದ್ವಿಚಕ್ರ ವಾಹನ ಖರೀದಿಸಿ ಕೊಟ್ಟಿದ್ದರು. ಅದೇ ವಾಹನದಲ್ಲಿ ಕಳೆದ ತಾ.೧೨ರಂದು ಮನೆಗೆ ತೆರಳುತ್ತಿದ್ದ ಸಂದರ್ಭ ಅಪಘಾತ ಕ್ಕೀಡಾಗಿ ದುರ್ಮರಣಕ್ಕೀಡಾದರು.
ಅಪಘಾತಕ್ಕೀಡಾದ ಮತ್ತೊಂದು ಬೈಕ್‌ನಲ್ಲಿದ್ದ ಕಾಗಡಿಕಟ್ಟೆ ಗ್ರಾಮದ ಮನೋಜ್‌ಭಟ್ ಹಾಗೂ ಪೈಂಟರ್ ಆಸೀಫ್ ಅವರುಗಳಿಗೂ ತೀವ್ರ ಗಾಯಗಳಾಗಿದ್ದು, ಮಡಿಕೇರಿ ಮತ್ತು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.