ಮಡಿಕೇರಿ, ಮೇ ೧೪: ನೆರೆಯ ಕೇರಳ ರಾಜ್ಯದಲ್ಲಿ ಟೊಮೆಟೊ ಜ್ವರ ಎಂಬ ಹೊಸ ಸ್ವರೂಪದ ರೋಗ ಲಕ್ಷಣ ಮಕ್ಕಳಲ್ಲಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ. ಕೇರಳದಿಂದ ಬರುವ ವಾಹನಗಳನ್ನು ತಪಾಸಣೆ ಮಾಡಿ ಬಿಡಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ ಎಂದು ಸಂಬAಧಿಸಿದ ಅಧಿಕಾರಿಗಳು ತಿಳಿಸಿದರು. ಆದರೆ ತಾ. ೧೪ರಂದು ಕುಟ್ಟ, ಮಾಕುಟ್ಟ, ಕರಿಕೆ ಭಾಗದಲ್ಲಿ ಯಾವುದೇ ತಪಾಸಣೆ ನಡೆದಿಲ್ಲ. ಕಳೆದ ಎರಡು ದಿನ ಒಂದಷ್ಟು ತಪಾಸಣೆಗೆ ಇಲಾಖಾ ಸಿಬ್ಬಂದಿಗಳು ಮುಂದಾಗಿದ್ದರೂ ಈ ಬಗ್ಗೆ ಇಲಾಖಾ ಸಿಬ್ಬಂದಿಗಳಿಗೆ ವಾಹನ ಮಾಲೀಕರಿಂದ ಸೂಕ್ತ ಸಹಕಾರ ದೊರೆತಿಲ್ಲವೆನ್ನಲಾಗಿದೆ.
ಕೇವಲ ಆರೋಗ್ಯ ಇಲಾಖಾ ಸಿಬ್ಬಂದಿಗಳು ಮಾತ್ರ ಈ ಬಗ್ಗೆ ತಪಾಸಣೆಗೆ ಮುಂದಾಗಿದ್ದ ಸಂದರ್ಭ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಅಸಹಕಾರ ತೋರಿರುವುದಾಗಿ ತಿಳಿದುಬಂದಿದೆ. ಮಾಕುಟ್ಟದಲ್ಲಿ ಇದು ಹೆಚ್ಚಾಗಿ ವರದಿಯಾಗಿದೆ.
(ಮೊದಲ ಪುಟದಿಂದ) ಈ ಕಾರಣದಿಂದಾಗಿ ಆರೋಗ್ಯ ಇಲಾಖಾ ಸಿಬ್ಬಂದಿಗಳು ಇದನ್ನು ಇದೀಗ ಕೈಬಿಟ್ಟಿದ್ದಾರೆ. ಕೇರಳದಿಂದ ಆಗಮಿಸುವ ಮಂದಿ ಈ ಕುರಿತು ಆದೇಶ ತೋರಿಸುವಂತೆ ಪ್ರಶ್ನಿಸುತ್ತಿರುವುದಾಗಿ ಹೇಳಲಾಗಿದೆ. ಇದರಿಂದಾಗಿ ಸೂಕ್ತ ಆದೇಶ ಹೊರಡಿಸಲು ಹಾಗೂ ಈ ಬಗ್ಗೆ ಆರೋಗ್ಯ ಇಲಾಖೆಗೆ ಪೊಲೀಸ್ ಇಲಾಖೆಯ ಸಹಕಾರವನ್ನು ಪಡೆಯುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ.
ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸೂಕ್ತ ಆದೇಶ ಹಾಗೂ ಪೊಲೀಸ್ ನೆರವು ಪಡೆಯುವ ನಿಟ್ಟಿನಲ್ಲಿ ತಾಲೂಕು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಬಹುತೇಕ ಎಲ್ಲಾ ಗಡಿಗಳಲ್ಲೂ ಇದೇ ಪರಿಸ್ಥಿತಿ ಎದುರಾಗಿದ್ದು, ತಾ. ೧೪ರಂದು ತಪಾಸಣೆ ನಡೆದಿಲ್ಲ ಎಂದು ‘ಶಕ್ತಿ’ ತಾ. ೧೪ರಂದು ಗಡಿಭಾಗಗಳ ಅವಲೋಕನ ನಡೆಸಿದ ಸಂದರ್ಭ ತಿಳಿದುಬಂದಿದೆ. ಶನಿವಾರ, ಭಾನುವಾರ ರಜಾ ದಿನವಾಗಿದ್ದು ಸೋಮವಾರದಿಂದ ಈ ಬಗ್ಗೆ ಮತ್ತೆ ಕ್ರಮ ಜಾರಿಯಾಗುವ ಸಾಧ್ಯತೆಗಳಿವೆ.