(ವರದಿ : ಚಕ್ರವರ್ತಿ) ಮಡಿಕೇರಿ, ಮೇ ೧೪: ಕೊಡಗು ಜಿಲ್ಲೆ ಕಾಫಿ ಉತ್ಪಾದನೆಯಲ್ಲಿ ರೋಬಸ್ಟಾ ಮಾದರಿಯಲ್ಲಿ ವೇಗದ ನಡಿಗೆ ಸಾಧಿಸಿದೆ. ರಾಜ್ಯದ ಒಟ್ಟು ಉತ್ಪಾದನೆ ಪೈಕಿ ಕೋವಿಡ್ ಕಗ್ಗಂಟಿನ ನಡುವೆಯೂ ಕಾರ್ಮಿಕರ ಸಮಸ್ಯೆಗಳ ಮಧ್ಯೆಯೂ ರಾಜ್ಯದಲ್ಲಿ ಶೇ.೬೧ರಷ್ಟು ರಾಜ್ಯದ ಉತ್ಪಾದನೆಯಲ್ಲಿ ಕೊಡಗಿನ ಪಾತ್ರವಿದೆ. ಕರ್ನಾಟಕದಲ್ಲಿ ಅರೇಬಿಕಾ ನಮೂನೆಯಲ್ಲಿ ಕೊಡಗಿನ ಪಾತ್ರ ಶೇ.೨೭. ದೇಶದ ಒಟ್ಟು ಉತ್ಪಾದನೆ ಪೈಕಿ ಕೊಡಗು ರೋಬಸ್ಟಾದಲ್ಲಿ ಶೇ.೪೨ರಷ್ಟು ಗಣನೀಯ ಪ್ರಮಾಣದ ಉತ್ಪಾದನೆ ಮಾಡಿ ಹಿರಿಮೆ ಸಾಧಿಸಿದೆ. ಅರೇಬಿಕಾ ಪೈಕಿ ದೇಶದಲ್ಲಿ ಕೊಡಗು ಶೇ.೧೯ರಷ್ಟು ಉತ್ಪಾದನೆಯ ಪ್ರಮಾಣವನ್ನು ನೀಡಿದೆ. ಅರೇಬಿಕಾ ಮತ್ತು ರೋಬಸ್ಟಾ ಸೇರಿ ದೇಶದ ಉತ್ಪಾದನೆಯಲ್ಲಿ ಶೇ.೩೬ರಷ್ಟು ಸಾಧನೆಗೈದಿದ್ದರೆ, ರಾಜ್ಯಮಟ್ಟದಲ್ಲಿ ಶೇ.೫೧ರಷ್ಟು ಸಾಧನೆ ಮಾಡಿದೆ.
ಈ ಅಂಕಿ ಅಂಶಗಳು ೨೦೨೧-೨೨ರ ಮುಂಗಾರು ಪೂರ್ವಭಾವಿ ಸಮೀಕ್ಷೆಯ ಆಧಾರದಿಂದ ಕಾಫಿ ಮಂಡಳಿಯ ಮಾಹಿತಿಯನ್ವಯ ಲಭ್ಯವಾಗಿದೆ. ಪೂರ್ವಭಾವಿ ಸಮೀಕ್ಷೆಯನ್ವಯ ದೇಶದಲ್ಲಿ ಪ್ರಸಕ್ತ ಸಾಲಿನಲ್ಲಿ ೩,೪೮,೫೦೦ ಮೆಟ್ರಿಕ್ ಟನ್ ಕಾಫಿ ಉತ್ಪಾದನಾ ನಿರೀಕ್ಷೆಯಿದ್ದು, ೨೦೨೦-೨೧ರಲ್ಲಿ ಅಂತಿಮ ಲೆಕ್ಕಾಚಾರದನ್ವಯ ೩,೩೪,೦೦೦ ಮೆಟ್ರಿಕ್ ಟನ್ ಉತ್ಪಾದಿಸಲಾಗಿತ್ತು. ಅಂದರೆ ಕಳೆದ ಬಾರಿಯ ಅಂತಿಮ ಉತ್ಪಾದನೆಗಿಂತ ಈ ಬಾರಿಯ ಪೂರ್ವಭಾವಿ ಸಮೀಕ್ಷೆಯನ್ವಯ ದೇಶದಲ್ಲಿ ೧೪,೫೦೦ ಮೆಟ್ರಿಕ್ ಟನ್‌ನಷ್ಟು
(ಮೊದಲ ಪುಟದಿಂದ) ಅಧಿಕ ಕಾಫಿ ಉತ್ಪಾದನೆಗೊಳ್ಳಲಿದೆ. ಕಳೆದ ಬಾರಿ ಅರೇಬಿಕಾ ಉತ್ಪಾದನೆ ದೇಶದಲ್ಲಿ ೯೯,೦೦೦ ಮೆಟ್ರಿಕ್ ಟನ್ ಇದ್ದರೆ, ಈ ಬಾರಿಯೂ ಅಷ್ಟೇ ಪ್ರಮಾಣ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಆದರೆ, ರೋಬಸ್ಟಾದಲ್ಲಿ ಮಾತ್ರ ಏರಿಕೆಯಾಗಿದೆ. ಕಳೆದ ಬಾರಿ ದೇಶದಲ್ಲಿ ರೋಬಸ್ಟಾ ಉತ್ಪಾದನಾ ಪ್ರಮಾಣ ೨,೩೫,೦೦೦ ಮೆಟ್ರಿಕ್ ಟನ್ ಆಗಿದ್ದರೆ, ಈ ಬಾರಿ ೧೪,೫೦೦ ಮೆಟ್ರಿಕ್ ಟನ್ ಅಧಿಕ ಅಂದರೆ, ಒಟ್ಟು ೨,೪೯,೫೦೦ ಮೆಟ್ರಿಕ್ ಟನ್ ಉತ್ಪಾದನಾ ನಿರೀಕ್ಷೆಯಿದೆ.
ಕರ್ನಾಟಕದಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ಒಟ್ಟು ೨,೪೮,೯೦೦ ಮೆಟ್ರಿಕ್ ಟನ್ ಕಾಫಿ ಉತ್ಪಾದನಾ ನಿರೀಕ್ಷೆಯಿದ್ದು, ಕಳೆದ ಸಾಲಿನಲ್ಲಿ ಇದರ ಪ್ರಮಾಣ ೨,೩೫,೫೦೦ ಮೆಟ್ರಿಕ್ ಟನ್‌ಗಳಾಗಿತ್ತು.
ಈ ವರ್ಷ ಕರ್ನಾಟಕದಲ್ಲಿ ೧೩,೪೦೦ ಟನ್ ಅಧಿಕ ಕಾಫಿ ಉತ್ಪಾದನಾ ನಿರೀಕ್ಷೆಯಿದೆ. ರೋಬಸ್ಟಾ ಕಾಫಿ ಪ್ರಸಕ್ತ ಸಾಲಿನಲ್ಲಿ ಕೊಡಗಿನಲ್ಲಿ ೨,೮೫೦ ಮೆಟ್ರಿಕ್ ಟನ್‌ಗಳಷ್ಟು ಕಳೆದ ಬಾರಿಗಿಂತ ಅಧಿಕ ಪ್ರಮಾಣ ಕಂಡುಬAದಿದೆ. ಆದರೆ, ಅರೇಬಿಕಾದಲ್ಲಿ ೧೪೦೦ ಮೆಟ್ರಿಕ್ ಟನ್‌ನಷ್ಟು ಇಳಿಮುಖಗೊಂಡಿದೆ. ಈ ವರ್ಷ ಕೊಡಗಿನಲ್ಲಿ ಅರೇಬಿಕಾ ೧೯,೨೦೦ ಮೆಟ್ರಿಕ್ ಟನ್ ಹಾಗೂ ರೋಬಸ್ಟಾ ೧,೦೭,೨೦೦ ಮೆಟ್ರಿಕ್ ಟನ್ ಹಾಗೂ ಒಟ್ಟು ೧,೨೬,೪೦೦ ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನಾ ನಿರೀಕ್ಷೆಯಿದೆ. ಅರೇಬಿಕಾಗೆ ತಗುಲಿದ ಬೋರರ್ ಇತ್ಯಾದಿ ರೋಗಗಳಿಂದಾಗಿ ಕುಂಠಿತವಾಗಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಉತ್ಪಾದನೆಯಲ್ಲಿ ಕರ್ನಾಟಕ ಅತ್ಯಧಿಕ ಕಾಫಿ ಪ್ರಮಾಣವನ್ನು ನೀಡುತ್ತಿದೆ. ಅದರಲ್ಲಿಯೂ ಕೊಡಗು ಇತರ ೨ ಜಿಲ್ಲೆಗಳಿಗಿಂತಲೂ ಮುಂದಿದೆ ಎಂಬುದು ಹೆಮ್ಮೆಯ ವಿಷಯ. ಈ ಬಗ್ಗೆ ಸುಂಟಿಕೊಪ್ಪದ ಬೆಳೆಗಾರರು ಹಾಗೂ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಅವರ ಅಭಿಪ್ರಾಯ ಬಯಸಿದಾಗ, ಪ್ರಸಕ್ತ ಸಾಲಿನಲ್ಲಿ ಕಾಫಿ ಉತ್ಪಾದನೆ ಕಡಿಮೆಯಾಗದಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಜೊತೆಗೆ ಮಧ್ಯಕಾಲೀನ ಪೂರ್ವ ಮುಂಗಾರು ಮಳೆ ಸಕಾಲಿಕವಾಗಿ ಪ್ರಯೋಜನಕಾರಿ ಯಾಗಿದೆ. ಜೊತೆಗೆ ೨ ನಮೂನೆಗಳ ಕಾಫಿಗೂ ಅದರಲ್ಲೂ ಪಾರ್ಚ್ಮೆಂಟ್ ಗಂತೂ ಅತ್ಯುತ್ತಮ ದರವಿರುವುದು ಆಶಾದಾಯಕ ಬೆಳವಣಿಗೆ. ಆದರೆ, ಇಷ್ಟೆಲ್ಲಾ ಇದ್ದರೂ ಕೂಡ ಕಾರ್ಮಿಕರ ಸಮಸ್ಯೆ, ವೇತನ ಏರಿಕೆ, ಗೊಬ್ಬರ ಇತ್ಯಾದಿ ಎಲ್ಲಾ ವಸ್ತುಗಳ ದರ ಏರಿಕೆ ಮೊದಲಾಗಿ ಸಮಸ್ಯೆಗಳು ಇನ್ನೂ ಬೆಳೆಗಾರರನ್ನು ಕಾಡುತ್ತಿದೆ. ಪ್ರಸಕ್ತ ವರ್ಷ ಉತ್ತಮ ದರವಿರುವುದರಿಂದ ಬೆಳೆಗಾರರು ಕೊಂಚ ನಿರಾಳವಾಗಿದ್ದಾರೆ. ಇದಕ್ಕೆ ಕಾರಣ ಹವಾಮಾನ ವೈಪರೀತ್ಯದಿಂದ ಬ್ರೆಝಿಲ್‌ನಲ್ಲಿ ಕಾಫಿ ಬೆಳೆಯ ಪ್ರಮಾಣ ತೀವ್ರ ಕುಸಿತ ಕಂಡಿದೆ. ಆದರೆ, ಮುಂದಿನ ವರ್ಷವೂ ಇದೇ ರೀತಿ ಇರುತ್ತದೆ ಎನ್ನಲಾಗುವುದಿಲ್ಲ. ಆದರೂ. ಈ ವರ್ಷ ಸಮಾಧಾನಕರವಾಗಿದೆ ಎನ್ನಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬೋಸ್ ಮಂದಣ್ಣ ಅವರ ಪ್ರಕಾರ ಅರೇಬಿಕಾ ಬೆಳೆಗೆ ೧ ಎಕರೆಗೆ ವರ್ಷಕ್ಕೆ ಕನಿಷ್ಟ ರೂ. ೮೦,೦೦೦ ಖರ್ಚು ಬೀಳುತ್ತದೆ. ಇದು ಒಂದು ರೀತಿ ಆತಂಕಕಾರಿ ಎನ್ನಬಹುದು ಎಂದರು.
ಪೂರ್ವ ಸಮೀಕ್ಷಾ ಕ್ರಮ
ಕಾಫಿ ಉತ್ಪಾದನೆಯ ಪೂರ್ವ ಸಮೀಕ್ಷಾ ಕ್ರಮವನ್ನು ಯಾವ ರೀತಿ ಮಾಡಲಾಗುತ್ತದೆ ಎಂದು ಮಡಿಕೇರಿ ಮತ್ತು ಸೋಮವಾರಪೇಟೆ ವಿಭಾಗದ ಕಾಫಿ ಮಂಡಳಿ ಉಪನಿರ್ದೇಶಕರಾದ ಶಿವಕುಮಾರ್ ಸ್ವಾಮಿ ಅವರನ್ನು ಪ್ರಶ್ನಿಸಿದಾಗ ಅವರು ಮಾಹಿತಿ ನೀಡಿದರು. ಜಿಲ್ಲೆಯ ಪ್ರಮುಖ ಕಾಫಿ ಬೆಳೆ ಪ್ರದೇಶಗಳಲ್ಲಿ ಕೆಲವೊಂದು ತೋಟಗಳನ್ನು ಆಯ್ದು ಸಮೀಕ್ಷೆ ನಡಸಲಾಗುತ್ತದೆ. ಅಲ್ಲಿಗೆ ಕಾಫಿ ಮಂಡಳಿ ಕ್ಷೇತ್ರ ಸಿಬ್ಬಂದಿಗಳು ತೆರಳಿ ಖುದ್ದಾಗಿ ವೀಕ್ಷಿಸಿ ಮಾಹಿತಿ ಪಡೆಯುತ್ತಾರೆ. ಅಲ್ಲದೆ, ಬೆಳೆಗಾರರ ಅನುಭವದ ಆಧಾರದಲ್ಲಿ ಕಳೆದ ವರ್ಷಗಳ ಉತ್ಪಾದನಾ ಪ್ರಮಾಣ ಈ ವರ್ಷ ಎಷ್ಟಾಗಬಹುದು ಎನ್ನುವ ಅಭಿಪ್ರಾಯಗಳನ್ನು ಪಡೆದು ಈ ಕಾರ್ಯ ನಡೆಸಲಾಗುತ್ತದೆ. ಸಾಮಾನ್ಯವಾಗಿ ಮುಂಗಾರು ಪೂರ್ವ ಸಮೀಕ್ಷೆಯ ಅಂಕಿ ಅಂಶಗಳು ಉತ್ಪಾದನೆಯ ಬಳಿಕ ಲಭ್ಯವಾಗುವ ಅಂಕಿ ಅಂಶಗಳಿಗೆ ಬಹುತೇಕ ಪೂರಕವಾಗಿರುತ್ತದೆ ಎಂದು ವಿವರಿಸಿದರು.
ವಿವಿಧ ಸಹಾಯ ಧನ
ಮಡಿಕೇರಿ ಕಾಫಿ ಮಂಡಳಿ ವಿಭಾಗದ ಹಿರಿಯ ಸಂಪರ್ಕಾಧಿಕಾರಿ ಅಜಿತ್ ಕುಮಾರ್ ರೌಟ್ ಅವರು ಇತ್ತೀಚಿನ ಕೆಲವು ಕಾಫಿ ಮಂಡಳಿ ಯೋಜನೆಗಳ ಕುರಿತು ಮಾಹಿತಿ ನೀಡಿ, ಜಿಲ್ಲೆಯ ಬೆಳೆಗಾರರು ಸದುಪಯೋಗ ಗೊಳಿಸುವಂತೆ ಕೋರಿದರು. ನೀರಾವರಿಗಾಗಿ ನೀರು ಶೇಖರಣಾ ಟ್ಯಾಂಕ್‌ಗಳನ್ನು ನಿರ್ಮಿಸಲು ಮತ್ತು ಸ್ಪಿçಂಕ್ಲರ್‌ಗಳ ವ್ಯವಸ್ಥೆಗಾಗಿ ಶೇ. ೪೦ರಷ್ಟು ಸಹಾಯಧನ ನೀಡಲಾಗುತ್ತಿದೆ. ಜೊತೆಗೆ ಹಳೆಯ ಕಾಫಿ ತೋಟಗಳಲ್ಲಿ ತೀರಾ ಹಳೆಯದಾದ ಗಿಡಗಳನ್ನು ತೆಗೆದು ಮರು ನೆಡುವಿಕೆಗಾಗಿ ಸಹಾಯಧನ ನೀಡಲಾಗುವುದು. ಇದರೊಂದಿಗೆ ಪೂರ್ಣ ರಾಸಾಯನಿಕ ಮಾದರಿಯಲ್ಲಿ ಕಾಫಿ ತೋಟವನ್ನು ಅಭಿವೃದ್ಧಿಪಡಿಸುವವರಿಗೆ ಕೆಲವೊಂದು ಆರ್ಥಿಕ ನೆರವನ್ನು ನೀಡಲಾಗುವುದು. ಅದಕ್ಕೆ ಮುಖ್ಯವಾಗಿ ಸಂಬAಧಿಸಿದ ಏಜೆನ್ಸಿಗಳಿಂದ ಇಕೋ ಸರ್ಟಿಫಿಕೇಶನ್ ನೀಡಬೇಕಾಗಿದೆ. ಆದರೆ, ಜಿಲ್ಲೆಯಲ್ಲಿ ಇನ್ನೂ ಅದು ಹೆಚ್ಚು ಪ್ರಚಾರವಾಗಿಲ್ಲ. ಕೆಲವೇ ಮಂದಿ ಬೆಳೆಗಾರರು ರಾಸಾಯನಿಕ ಗೊಬ್ಬರಗಳನ್ನು ಬಳಸಿ ತೋಟಗಳನ್ನು ನಿರ್ವಹಿಸುತ್ತಿದ್ದು, ಅವರಿಗೆ ಈ ಸೌಲಭ್ಯ ನೀಡಲಾಗಿದೆ. ಜೊತೆಗೆ ಪ್ರಧಾನಿ ಮೋದಿ ಅವರ ಒಂದು ಜಿಲ್ಲೆಗೆ ಒಂದೇ ಬೆಳೆ ಎನ್ನುವ ಯೋಜನೆಯಡಿಯೂ ಕೂಡ ಸಹಾಯಧನವನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.
ಮಣ್ಣು ಪರೀಕ್ಷೆ ಅತೀ ಮುಖ್ಯ
ಅಜಿತ್ ಕುಮಾರ್ ಅವರು ಜಿಲ್ಲೆಯ ಬೆಳೆಗಾರರಿಗೆ ಮುಖ್ಯವಾದ ಸಲಹೆ ನೀಡಿದರು. ಕನಿಷ್ಟ ೨ ವರ್ಷಗಳಿಗೊಮ್ಮೆ ತೋಟಗಳ ಮಣ್ಣನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬೇಕು. ಕೊಡಗಿನಲ್ಲಿ ಚೆಟ್ಟಳ್ಳಿ ಮತ್ತು ಗೋಣಿಕೊಪ್ಪಗಳಲ್ಲಿ ಈ ಪ್ರಯೋಗಾಲಯ ಕೇಂದ್ರಗಳಿವೆ. ಅತೀ ಕನಿಷ್ಟ ದರಗಳನ್ನು ವಿಧಿಸಲಾಗುತ್ತಿದೆ. ಕೊಡಗಿನ ಏರು - ತಗ್ಗು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಜಾರಿ ಹೋಗುವುದರಿಂದ ಅದರಲ್ಲಿನ ಸುಣ್ಣ ಮತ್ತಿತರ ಸತ್ವಗಳು ಕ್ಷೀಣಗೊಳ್ಳುತ್ತಿರುತ್ತವೆ. ಆಯಾ ತೋಟಗಳ ಮಣ್ಣಿನ ಮಾದರಿಗೆ ಪೂರಕವಾದ ಸುಣ್ಣವನ್ನು ಅಗತ್ಯ ಪ್ರಮಾಣದಲ್ಲಿ ೨ ವರ್ಷಗಳಿಗೊಮ್ಮೆ ಹಾಕುತ್ತಿದ್ದರೆ ಈ ಫಲವತ್ತತೆ ಕಡಿಮೆಯಾಗದೆ ಉತ್ತಮ ಗುಣಮಟ್ಟದ ಕಾಫಿ ಉತ್ಪಾದನೆಗೆ ಸಹಕಾರಿಯಾಗುತ್ತದೆ ಎಂದು ಅವರು ನುಡಿದರು.