ವೀರಾಜಪೇಟೆ, ಮೇ ೧೪: ಸೀಮಿತ ತಂಡಗಳ ಮಧ್ಯೆ ನಡೆದ ವೀರಾಜಪೇಟೆ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಆದ್ಯಾ ಕ್ರಿಕೆರ‍್ಸ್ ತಂಡವು ವಿಜಯಶಾಲಿಯಾಗಿ ಹೊರಹೊಮ್ಮಿತು.

ವೀರಾಜಪೇಟೆ ನಗರದ ಯುವ ಸ್ನೇಹಿತರ ಸಂಘದ ಆಶ್ರಯದಲ್ಲಿ, ನಗರದ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಒಟ್ಟು ೬ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಪಂದ್ಯಾಟವು ಒಟ್ಟು ೨೦ ಓವರ್‌ಗಳಿಗೆ ಸೀಮಿತವಾಗಿದ್ದು ಲೀಗ್ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಅಂತಿಮ ಪಂದ್ಯಾಟವು ಆದ್ಯಾ ಕ್ರಿಕೆರ‍್ಸ್ ಮತ್ತು ತ್ರೀಸ್ಟಾರ್ ತಂಡಗಳ ಮಧ್ಯೆ ನಡೆದು ೪೧ ರನ್‌ಗಳ ಅಂತರದಿAದ ಆದ್ಯಾ ಕ್ರಿಕೆರ‍್ಸ್ ತಂಡ ತ್ರೀಸ್ಟಾರ್ ತಂಡವನ್ನು ಮಣಿಸಿತು.

ಪ್ರಥಮ ಸೆಮಿ ಫೈನಲ್ ಪಂದ್ಯಾಟ ತ್ರೀಸ್ಟಾರ್ ಮತ್ತು ಮನ್ನಾ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆದು ತ್ರೀಸ್ಟಾರ್ ತಂಡವು ಮನ್ನಾ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶ ಪಡೆದುಕೊಂಡಿತು. ದ್ವಿತೀಯ ಸೆಮಿ ಫೈನಲ್ ಪಂದ್ಯಾಟದಲ್ಲಿ ಎಂ.ವೈ.ಸಿ.ಸಿ ತಂಡವನ್ನು ಮಣಿಸಿದ ಆದ್ಯಾ ಕ್ರಿಕೆರ‍್ಸ್ ತಂಡವು ಫೈನಲ್‌ಗೆ ಆರ್ಹತೆ ಪಡೆಯಿತು.

ಫೈನಲ್‌ನಲ್ಲಿ ಮೊದಲು ಟಾಸ್ ಗೆದ್ದ ಆದ್ಯಾ ಕ್ರಿಕೆರ‍್ಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ೧೮.೧ ಓವರ್‌ಗಳಲ್ಲಿ ತನ್ನ ೧೦ ವಿಕೆಟ್ ಕಳೆದುಕೊಂಡು ೧೨೮ ರನ್‌ಗಳನ್ನು ಕಲೆಹಾಕಿತು. ನಂತರದಲ್ಲಿ ಬ್ಯಾಟಿಂಗ್ ಮಾಡಿದ ತ್ರೀಸ್ಟಾರ್ ತಂಡವು ೧೪.೪ ಓವರ್‌ಗಳಲ್ಲಿ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ೮೭ ರನ್‌ಗಳನ್ನು ಗಳಿಸಿ ಸೋಲಿನ ಹಾದಿ ಹಿಡಿಯಿತು. ವಿಜೇತ ತಂಡದ ಪರವಾಗಿ ಅಫ್ರೋಜ್ ೪೫, ಲಿಂಡೇಲ್ ೨೦ ಹಾಗೂ ಗುರು ೧೫ ರನ್ ಕಲೆಹಾಕಿದರು. ತ್ರೀಸ್ಟಾರ್ ತಂಡದ ಪರವಾಗಿ ಅನುಭ್ ೩, ಶಾರುಖ್ ಮತ್ತು ಅನ್ಸಾರ್ ಅವುರುಗಳು ತಲಾ ೨ ವಿಕೆಟ್ ಕಬಳಿಸಿದರು. ತ್ರೀಸ್ಟಾರ್ ತಂಡದ ಪರವಾಗಿ ಬಿಜು ೨೩, ಮೊಹಮ್ಮದ್ ೧೯ ಮಜೀದ್ ೧೪ ರನ್ ಗಳನ್ನು ಗಳಿಸಿದರು. ವಿಜೇತ ತಂಡದ ಪರವಾಗಿ ಬೌಲಿಂಗ್ ಕ್ಷೇತ್ರದಲ್ಲಿ ಯಾಸಿನ್ ೪, ಯಾಸಿರ್, ಭರತ್, ನಿಖಿಲ್ ಮತ್ತು ಅಫ್ರೋಜ್ ತಲಾ ೧ ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿಗೆ ಕಾರಣಕರ್ತರಾದರು.

ವಿಜೇತ ತಂಡವಾದ ಆದ್ಯಾ ಕ್ರಿಕೆರ‍್ಸ್ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ೩೩,೩೩೩ ರೂ ನಗದು ಮತ್ತು ಪರಾಜಿತ ತಂಡಕ್ಕೆ ಟ್ರೋಫಿ ಮತ್ತು ೨೨,೨೨೨ ರೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಂತಿಮ ಪಂದ್ಯಾಟದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಆಫ್ರೋಜ್ ಅವರು ಪಡೆದುಕೊಂಡರು, ಸರಣಿ ಶ್ರೇಷ್ಟ ಮತ್ತು ಉತ್ತಮ ಬ್ಯಾಟ್ಸ್ಮ್ಯಾನ್ ಪ್ರಶಸ್ತಿಯನ್ನು ಶಂಷುದ್ದೀನ್ ಅವರು ಪಡೆದುಕೊಂಡರು. ಉತ್ತಮ ಬೌಲಿಂಗ್ ಪ್ರಶಸ್ತಿ ಶಾರುಖ್, ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಸುಭಾಶ್ ಅವರು ಗಿಟ್ಟಿಸಿಕೊಂಡರು.