ಗೋಣಿಕೊಪ್ಪಲು, ಮೇ ೧೪: ಮೇ ೪ರಂದು ೬೦ಕ್ಕೂ ಹೆಚ್ಚಿನ ಆದಿವಾಸಿ ಕುಟುಂಬಗಳು ಅಡುಗುಂಡಿ ಅರಣ್ಯ ಪ್ರದೇಶದ ಗೇಟ್ ಬಳಿ ಪ್ರತಿಭಟನೆ ಆರಂಭಿಸಿ ೬ ದಿನಗಳು ಕಳೆದಿವೆ.

ಆರಂಭದ ದಿನ ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿದ ಬೆಳಗ್ಗಿನ ಉಪಹಾರ ಹೊರತುಪಡಿಸಿ ಇಲ್ಲಿಯವರೆಗೆ ಇವರಿಗೆ ಆಹಾರದ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಪ್ರತಿಭಟನೆಯಲ್ಲಿರುವ ಆದಿವಾಸಿಗಳು ತಾವೇ ಅಡುಗೆ ಮಾಡಿ ಊಟದ ವ್ಯವಸ್ಥೆ ಮಾಡಿಕೊಂಡು ಪ್ರತಿಭಟನೆ ಮುಂದುವರೆಸುತ್ತಿದ್ದಾರೆ. ಆಹಾರ ಸಾಮಗ್ರಿಗಳಿಲ್ಲದೆ ಶನಿವಾರ ಮುಂಜಾನೆ ಆಹಾರಕ್ಕಾಗಿ ಸಮೀಪದಲ್ಲಿರುವ ಕಾಫಿ ತೋಟದಿಂದ ಹಲಸಿನ ಹಣ್ಣು ಹಾಗೂ ಕಾಯಿಯನ್ನು ತಂದು ಮುಂಜಾನೆಯ ಆಹಾರ ಸೇವಿಸಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಆಹಾರ ತಯಾರಿಸಲು ಸೌದೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರು ಮಕ್ಕಳಾದಿಯಾಗಿ ಪ್ರತಿಭಟನೆ ಹಮ್ಮಿಕೊಂಡಿರುವ ಆದಿವಾಸಿಗಳಿಗೆ ದಿನದಿಂದ ದಿನಕ್ಕೆ ಸಮಸ್ಯೆ ಎದುರಾಗುತ್ತಿದೆ. ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಜಿಲ್ಲಾಡಳಿತಕ್ಕೆ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಗೆ ತೆರಳುವ ವಿವಿಧ ಸಂಘ ಸಂಸ್ಥೆ ಪ್ರಮುಖರು ನೀಡುವ ಆಹಾರ ಸಾಮಗ್ರಿಗಳಿಗೆ ಇಲ್ಲಿನ ಆದಿವಾಸಿಗಳು ಅವಲಂಭಿತರಾಗಿದ್ದಾರೆ. ಪ್ರತಿಭಟನೆಯಲ್ಲಿರುವ ಕೆಲವು ಮಹಿಳೆಯರು ಸರತಿಯಂತೆ ಸಮಯಕ್ಕೆ ಸರಿಯಾಗಿ ಅಡುಗೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಸುರಿಯುತ್ತಿರುವ ಮಳೆ ಹಾಗೂ ಗಾಳಿಯಲ್ಲಿಯೇ ಊಟದ ವ್ಯವಸ್ಥೆ ನಡೆಯುತ್ತಿದ್ದು ಪ್ಲಾಸ್ಟಿಕ್ ಹೊದಿಕೆಯೇ ಇವರಿಗೆ ಆಶ್ರಯ ತಾಣವಾಗಿದೆ. ಪ್ರತಿನಿತ್ಯ ಇಲ್ಲಿ ಹಲವು ಮಂದಿ ಅಸ್ವಸ್ಥಗೊಳ್ಳುತ್ತಿದ್ದು ಆರೋಗ್ಯ ಸಮಸ್ಯೆ ಇವರನ್ನು ಕಾಡುತ್ತಿದೆ. ತೀವ್ರ ಅಸ್ವಸ್ಥಗೊಂಡ ಹಾಡಿಯ ಮುಖಂಡ ಜೇನುಕುರುಬರ ಸಣ್ಣಯ್ಯ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಆಗಮಿಸುವುದನ್ನು ಎದುರು ನೋಡುತ್ತಿದ್ದಾರೆ. ಆದರೆ ಮೈಸೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ ಅವರು ಇಲ್ಲಿಯವರೆಗೂ ಆಗಮಿಸಿಲ್ಲ. ಇದನ್ನು ತಿಳಿದ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಪ್ರತಿಭಟನೆಯಲ್ಲಿ ತೊಡಗಿರುವ ಹಲವು ಮುಖಂಡರೊAದಿಗೆ ಮೈಸೂರಿನಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಗಮನ ಸೆಳೆಯುವ ಭರವಸೆ ನೀಡಿದ್ದಾರೆ. ಕೆಲವು ದಿನಗಳಲ್ಲಿ ಹೋರಾಟಗಾರರ ಮುಖಂಡರೊAದಿಗೆ ರೈತ ಸಂಘದ ಪದಾಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಕಾರವಾರ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ ಭೇಟಿ ನೀಡಿ ಇಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಸ್ಥಳದಿಂದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಆದಿವಾಸಿಗಳು ತಮ್ಮ ಹಕ್ಕನ್ನು ಪಡೆಯಲು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಸುಸಜ್ಜಿತವಾದ ಶೆಡ್ ನಿರ್ಮಿಸಲು ಸೂಚನೆ ನೀಡಿದ್ದಾರೆ. ತಮ್ಮ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಹೋರಾಟದ ಮುಂದಾಳತ್ವ ವಹಿಸಿರುವ ಜೇನುಕುರುಬರ ಅಯ್ಯಪ್ಪ ದೂರವಾಣಿ ಮೂಲಕ ಮೈಸೂರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಸ್ಥಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ವಿಶೇಷ ತುಕಡಿಗಳು ಮೊಖಂ ಹೂಡಿವೆ.

-ಹೆಚ್.ಕೆ.ಜಗದೀಶ್