ಗೋಣಿಕೊಪ್ಪ ವರದಿ, ಮೇ. ೧೩ : ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಲೀಗ್ ಟೂರ್ನಿಯಲ್ಲಿ ಬ್ಲೇಜ್, ಶಿವಾಜಿ, ಕೋಣನಕಟ್ಟೆ ಹಾಗೂ ಬೇಗೂರು ತಂಡಗಳು ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿವೆ.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್, ಬೇರಳಿನಾಡ್ ಯುಎಸ್‌ಸಿ, ಬ್ಲೂಸ್ಟಾರ್ ಸೋಮವಾರಪೇಟೆ ಹಾಗೂ ಪೊದ್ದಮಾನಿ ತಂಡಗಳು ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದವು.
ಬ್ಲೇಜ್ ತಂಡಕ್ಕೆ ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ೪-೧ ಗೋಲುಗಳ ಜಯ ದೊರೆಯಿತು. ೪೭ ಮತ್ತು ೫೨ನೇ ನಿಮಿಷದಲ್ಲಿ ರಾಯಲ್ ಅಯ್ಯಣ್ಣ ಜೋಡಿ ಗೋಲು ಹೊಡೆದು ಪಂದ್ಯಕ್ಕೆ ಮುನ್ನಡೆ ತಂದುಕೊಟ್ಟರು. ೧೩ ನೇ ನಿಮಿಷದಲ್ಲಿ ಮಂಜು, ೧೮ ರಲ್ಲಿ ಪ್ರಜ್ವಲ್ ತಲಾ ಒಂದೊAದು ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸುವಲ್ಲಿ ನೆರವಾದರು. ಅಮ್ಮತ್ತಿ ಆಟಗಾರ ಪ್ರತಿಕ್ ಪೂವಣ್ಣ ೪೯ ನೇ ನಿಮಿಷದಲ್ಲಿ ಏಕೈಕ ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು.
ಶಿವಾಜಿ ಪೊದ್ದಮಾನಿ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು. ೩೧ ರಲ್ಲಿ ನಿರನ್, ೪೬ ರಲ್ಲಿ ಪುನಿತ್, ಪೊದ್ದಮಾನಿ ಪರ ೩೨ ರಲ್ಲಿ ನಾಣಯ್ಯ ಗೋಲು ಹೊಡೆದರು. ಕೋಣನಕಟ್ಟೆಗೆ ಬ್ಲೂಸ್ಟಾರ್ ಸೋಮವಾರಪೇಟೆ ವಿರುದ್ದ ೩-೦ ಗೋಲುಗಳ ಭರ್ಜರಿ ಗೆಲುವು ದಕ್ಕಿತು. ೩ ನೇ ನಿಮಿಷದಲ್ಲಿ ಕೆ. ನಾಚಪ್ಪ, ೨೬ ರಲ್ಲಿ ಯಶ್ವಿನ್, ೫ ರಲ್ಲಿ ಅಚ್ಚಪ್ಪ ಗೋಲು ಹೊಡೆದರು. ಬ್ಲೂಸ್ಟಾರ್ ಸೋಮವಾರಪೇಟೆ ಗೋಲು ದಾಖಲಿಸುವಲ್ಲಿ ಎಡವಿತು.
ಬೇಗೂರು ತಂಡ ಬೇರಳಿನಾಡ್ ಯುಎಸ್‌ಸಿ ತಂಡವನ್ನು ೪-೨ ಗೋಲುಗಳಿಂದ ಸೋಲಿಸಿತು. ೨೭ ನೇ ನಿಮಿಷದಲ್ಲಿ ಬೇಗೂರು ತಂಡದ ಅಯ್ಯಣ್ಣ, ೪೪ ರಲ್ಲಿ ದೀಪಕ್, ೪೯ ರಲ್ಲಿ ಮಣಿ, ೫೬ ರಲ್ಲಿ ಎಂ. ಎಸ್. ಬೋಪಣ್ಣ, ೪೬ ರಲ್ಲಿ ಬೇರಳಿನಾಡ್ ತಂಡದ ಮೊಣ್ಣಪ್ಪ, ೫೩ ರಲ್ಲಿ ಉತ್ತಪ್ಪ ಗೋಲು ಹೊಡೆದರು. ಕೊನೆಯ ಅವಧಿಯಲ್ಲಿ ಬೇರಳಿನಾಡ್ ಪುಟಿದೇಳುವ ಮೂಲಕ ೨ ಗೋಲು ದಾಖಲಿಸಿ ಸಂಚಲನ ಮೂಡಿಸಿತು.