*ಗೋಣಿಕೊಪ್ಪ, ಮೇ ೧೨: ಬಿಜೆಪಿ ಪಕ್ಷ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಿಕೊಂಡಿದ್ದು, ಜಾಗೃತಿ, ಸಂಘಟನೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿರುವ ೨೦೫ ಜಾತಿ, ೮೦೦ಕ್ಕೂ ಹೆಚ್ಚು ಉಪಜಾತಿ ಸಮುದಾಯಗಳಿಗೆ ನ್ಯಾಯ ಒದಗಿಸಲು ಅವಕಾಶ ದೊರೆತಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ನರೇಂದ್ರಬಾಬು ಹೇಳಿದರು.

ವೀರಾಜಪೇಟೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಬುಧವಾರ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳನ್ನು ಒಟ್ಟಾಗಿಸಿ, ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ನೇರವಾಗಿ ಒಂದೇ ಜಾತಿಗೆ ಸಾಮಾಜಿಕ ನ್ಯಾಯ, ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಗುರುತಿಸಿ ಪ್ರೋತ್ಸಾಹಿಸಲು ಸಾಧ್ಯವಾಗದ ಹಿನ್ನೆಲೆ, ಇಂತಹ ಯೋಜನೆ ಯಶಸ್ಸು ತರುತ್ತಿದೆ ಎಂದರು.

ಪಕ್ಷ ಸಂಘಟನೆಗೆ ಹಿಂದುಳಿದ ವರ್ಗಗಳ ಎಲ್ಲರನ್ನೂ ಸೇರಿಸುವ ಕಾರ್ಯ ನಡೆಯಬೇಕು. ರಾಜ್ಯದಲ್ಲಿರುವ ೩೧೨ ಮಂಡಲಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ರಾಜಕೀಯವಾಗಿ ತೊಡಗಿಕೊಂಡಾಗ ಸಮುದಾಯದ ಅಭಿವೃದ್ಧಿ ಕೂಡ ಸಾಧ್ಯವಿದೆ. ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಸಮುದಾಯಗಳಿಗೆ ನೀಡುತ್ತಿದ್ದ ಮೀಸಲಾತಿ ಹಿಂದುಳಿದವರಿಗೂ ಶೇಕಡವಾರು ಕಡಿಮೆಗೊಳಿಸಿ ಸರ್ಕಾರದ ಸವಲತ್ತು ನೀಡುತ್ತಿದೆ. ಒಗ್ಗಟ್ಟಾಗಿ ಪಕ್ಷ ಸಂಘಟನೆಯೊAದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಮನೆ, ಮನೆಗಳಿಗೆ ತಲುಪಿಸಲು ಮುಂದಾಗಬೇಕು ಎಂದು ಕಾರ್ಯಕರ್ತರಿಗೆ ಅವರು ಸಲಹೆ ನೀಡಿದರು.

ಪಕ್ಷದ ಪ್ರಮುಖ ಸುಬ್ರಮಣಿ ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಹಿರಿಯರಾದ ದೀನ್ ದಯಾಳ್ ಉಪಾಧ್ಯಾಯ ಹಾಗೂ ಶ್ಯಾಮ್ ಪ್ರಕಾಶ್ ಮುಖರ್ಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ವೀರಾಜಪೇಟೆ ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೆ. ರಾಜೇಶ್, ಜಿಲ್ಲಾಧ್ಯಕ್ಷ ಆನಂದ್ ರಘು, ತಾಲೂಕು ಬಿಜೆಪಿ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ದಬ್ಬಿ, ಪ್ರಮುಖರಾದ ಬಿ.ಎನ್. ಪ್ರಕಾಶ್, ಸತೀಶ್, ಕೃಷ್ಣಮೂರ್ತಿ, ವಿಠಲಪೂಜಾರಿ ಇದ್ದರು.