ಸುಂಟಿಕೊಪ್ಪ, ಮೇ ೧೦: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಡಗು ಜಿಲ್ಲೆ ವತಿಯಿಂದ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ರೆಡ್ ಕ್ರಾಸ್ ದಿನದಂದು ರಕ್ತ ದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಕಾರ್ಯಕ್ರಮದ ಉದ್ಘಾಟನೆಯನ್ನು ನೆÀರವೇರಿಸಿ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯವರು ಜಿಲ್ಲಾದ್ಯಂತ ಹಲವಾರು ಬಾರಿ ರಕ್ತದಾನ ಶಿಬಿರ ಏರ್ಪಡಿಸಿಕೊಂಡು ಬಂದಿದ್ದಾರೆ. ಇದುವರೆಗೆ ಕೆಲವರು ಇಂತಹ ಶಿಬಿರದಲ್ಲಿ ೪೦ ರಿಂದ ೫೦ ಬಾರಿ ರಕ್ತವನ್ನು ನೀಡಿದ್ದಾರೆ. ಇವರಿಗೆ ಧನ್ಯವಾದಗಳನ್ನು ಹೇಳುವ ಸಲುವಾಗಿ ಇಂತಹ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ರಕ್ತವನ್ನು ನೀಡಿದವರೇ ನೀಡುವುದರ ಬದಲಾಗಿ ಈಗಿನ ಯುವಕರು ರಕ್ತದಾನ ಮಾಡುವುದರಿಂದ ರಕ್ತದ ಕೊರತೆಯನ್ನು ನೀಗಿಸಬಹುದು. ರಕ್ತದಾನ ಮಾಡುವ ಮೊದಲು ತೂಕ ಹಾಗೂ ಎಚ್.ಬಿ.ಯನ್ನು ಪರೀಕ್ಷಿಸಿ ಕೊಳ್ಳಬೇಕು. ಒಬ್ಬ ಆರೋಗ್ಯವಂತ ವ್ಯಕ್ತಿಯಿಂದ ೩೫೦ ರಿಂದ ೪೦೦ ಎಂ.ಎಲ್. ರಕ್ತವನ್ನು ತೆಗೆದುಕೊಳ್ಳಲಾಗುತ್ತದೆ. ರಕ್ತದಾನ ಮಾಡುವುದರಿಂದ ಹೃದಯಾಘಾತವಾಗುವುದು ಕಡಿಮೆಯಾಗುತ್ತದೆ, ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಅಲ್ಲದೆ ಬಹಳಷ್ಟು ಜನರ ಪ್ರಾಣವನ್ನು ಕಾಪಾಡುತ್ತದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ ರವೀಂದ್ರ ರೈ ಮಾತನಾಡಿ ಶಿಬಿರಗಳಲ್ಲಿ ಸಂಗ್ರಹಿಸಿ ರಕ್ತವನ್ನು ಅಪಘಾತ, ಹೆರಿಗೆ ಮುಂತಾದ ತುರ್ತು ಸಂದರ್ಭದಲ್ಲಿ ಬಳಸಲಾಗುತ್ತದೆ. ರಕ್ತದಾನಕ್ಕೆ ಎಲ್ಲರೂ ಮುಂದಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಜೆಸಿಐ ಸಂಸ್ಥೆ ಅಧ್ಯಕ್ಷ ಸತೀಶ್, ಮಡಿಕೇರಿ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಡಾ. ವೀಣಾ, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಶ್ಮಿ, ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷೆ ಎಂ. ಧನಂಜಯ ಉಪಸ್ಥಿತರಿದ್ದರು.