ಮುಳ್ಳೂರು, ಮೇ ೧೦: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿಯ ವಿವಿಧೆಡೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಶನಿವಾರಸಂತೆ ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಸಾರ್ವಜನಿಕ ಸಮುದಾಯ ಭವನಕ್ಕೆ ಹೋಗುವ ರಸ್ತೆಯ ಅಭಿವೃದ್ಧಿ ಕಾಮಗಾರಿ, ಪಟ್ಟಣದ ಸಹಕಾರ ಬ್ಯಾಂಕ್ ಬಳಿಯಿಂದ ಸಂತೆ ಮಾರುಕಟ್ಟೆ ಕಡೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, ಶನಿವಾರಸಂತೆ ಪೊಲೀಸ್ ಠಾಣೆ ಬಳಿಯಿಂದ ಬಿದರೂರು ಗ್ರಾಮಕ್ಕೆ ತೆರಳುವ ರಸ್ತೆ ಕಾಮಗಾರಿ, ಶನಿವಾರಸಂತೆ ಮಾರುಕಟ್ಟೆಯಿಂದ ಬೈಪಾಸ್ ರಸ್ತೆಯ ಅಭಿವೃದ್ಧಿ ಕಾಮಗಾರಿ ಮತ್ತು ಶನಿವಾರಸಂತೆಯಿAದ ಹೆಮ್ಮನೆ ಗ್ರಾಮಕ್ಕೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಒಟ್ಟು ರೂ. ೨೫ ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಎಂ.ಪಿ. ಅಪ್ಪಚ್ಚುರಂಜನ್ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಸರಕಾರ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಗೊಳಿಸಿರುವ ಹಿನ್ನೆಲೆಯಲ್ಲಿ ಈ ಹಿಂದೆ ಗ್ರಾಮೀಣ ಭಾಗದಲ್ಲಿ ರಸ್ತೆ ದುಸ್ಥಿತಿ ಬಗ್ಗೆ ಸಮೀಕ್ಷೆ ನಡೆಸಲಾಗಿತು. ಅದರಂತೆ ವಿವಿಧ ಗ್ರಾ.ಪಂ.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು. ಈ ಸಂದರ್ಭ ಮಾಜಿ ಜಿ.ಪಂ. ಸದಸ್ಯೆ ಸರೋಜಮ್ಮ, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್, ಮಾಜಿ ಗ್ರಾ.ಪಂ. ಸದಸ್ಯ ಎಸ್.ಎನ್. ರಘು, ಜಿ.ಪಂ. ಇಂಜಿನಿಯರ್ ವೀರೇಂದ್ರಕುಮಾರ್, ವಿವಿಧ ಗ್ರಾ.ಪಂ.ಗಳ ಅಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಬಿಜೆಪಿ ಪ್ರಮುಖರು ಹಾಜರಿದ್ದರು. ದುಂಡಳ್ಳಿ, ಬ್ಯಾಡಗೊಟ್ಟ, ಕೊಡ್ಲಿಪೇಟೆ, ಬೆಸೂರು, ಹಂಡ್ಲಿ, ನಿಡ್ತ ಮತ್ತು ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಗಳಲ್ಲಿ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೂ ಶಾಸಕರು ಭೂಮಿಪೂಜೆ ನೆರವೇರಿಸಿದರು.