ಸುಂಟಿಕೊಪ್ಪ, ಮೇ ೧೦: ಧರ್ಮ ದೇವತೆಗಳ ನೆಲೆ ಒಂದೆಡೆ ಶಾಶ್ವತವಾಗಿ ನೆಲೆಗೊಂಡಾಗ ನಮ್ಮ ಅಂತರAಗದಲ್ಲಿ ನಂಬಿಕೆ ಉಳಿದಾಗ ಮಾತ್ರ ಧರ್ಮದ ಶಕ್ತಿ ಉಳಿಯಲು ಸಾಧ್ಯ ಎಂದು ಚಿಕ್ಕಮಗಳೂರು ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಧರ್ಮಕರ್ತರಾದ ಡಾ.ಭೀಮೇಶ್ವರ ಜೋಶಿ ಹೇಳಿದರು.
ಸುಂಟಿಕೊಪ್ಪ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ ಸಮಿತಿ ವತಿಯಿಂದ ಸುಂಟಿಕೊಪ್ಪದಲ್ಲಿ ನೂತನವಾಗಿ ಪುನರ್ ನಿರ್ಮಿಸಿರುವ ಚಾಮುಂಡೇಶ್ವರಿ, ಮುತ್ತಪ್ಪ ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲ ಶೋತ್ಸವದ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ದೇವಾಲಯದಲ್ಲಿ ಮೂರ್ತಿಗೆ ಅಷ್ಠಬಂಧ ಹಾಕಿ ಶಾಶ್ವತವಾಗಿ ಕೂರಿಸಿದಾಗ ಮಾತ್ರ ದೇವರುಗಳು ಶಾಶ್ವತವಾಗಿ ಸ್ಥಿರವಾಗಿ ನಿಲ್ಲಲು ಸಾಧ್ಯ. ನಾವೆಲ್ಲರೂ ದೇವರೊಂದಿಗೆ ಸಂಧಾನ ಮಾಡಿಕೊಳ್ಳಬೇಕು. ಆದಾಗ ಮಾತ್ರ ನಮಗೆ ನೆಮ್ಮದಿ, ಶಾಂತಿ, ಸಂತೋಷ ಸಿಗಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಂಕನ ಕರುಂಬಯ್ಯ ವಹಿಸಿದ್ದರು.
ಸುಂಟಿಕೊಪ್ಪ ಕಾಫಿ ಬೆಳೆಗಾರರಾದ ಎಸ್.ಎಂ.ಗಣೇಶ್, ಪ್ರಿಮ್ಲಾ ಗಂಗಾಧರ್, ಶ್ರೀ ರಾಮ ಸೇವಾ ಸಮಿತಿಯ ಅಧ್ಯಕ್ಷ ಎಸ್.ಬಿ. ಶಂಕರ್, ಕೊಡಗರಹಳ್ಳಿ ಚೌಡಿಕಾಡು ತೋಟದ ಮಾಲೀಕ ಹರೀಶ್ ಪೈ, ಮಂಗಳೂರು ಕರ್ನಾಟಕ ಬ್ಯಾಂಕಿನ ಎಜೆಎಂ ಚಂದ್ರಶೇಖರ್, ಪಿ.ಆರ್.ಸಿ ಮಾಲೀಕರಾದ ಅಶ್ವಿನಿ ಪುರು ಷೋತ್ತಮ ರೈ, ಸೋಮವಾರಪೇಟೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರೋಹಿತ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ಕೇರಳದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಶಂಕರ ನಂಬೂದರಿ, ಸಮಿತಿಯ ಕಾರ್ಯದರ್ಶಿ ಡಾ.ಶಶಿಕಾಂತ್ ರೈ, ಖಜಾಂಚಿ ಎಸ್.ಜಿ. ಶ್ರೀನಿವಾಸ್, ಉಪಾಧ್ಯಕ್ಷ ಕೆ.ಪಿ. ಜಗನ್ನಾಥ್, ಜಗದೀಶ್ ರೈ ಸೇರಿದಂತೆ ಇತರರು ಇದ್ದರು.
ಧಾರ್ಮಿಕ ಸಭೆಗೆ ಆಗಮಿಸಿದ್ದ ಚಿಕ್ಕಮಗಳೂರು ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಧರ್ಮಕರ್ತರಾದ ಡಾ.ಭೀಮೇಶ್ವರ ಜೋಶಿ ಅವರನ್ನು ಸುಂಟಿಕೊಪ್ಪದ ಶ್ರೀ ರಾಮ ಮಂದಿರ ಬಳಿಯಿಂದ ಅದ್ಧೂರಿಯಾಗಿ ಸ್ವಾಗತಿಸಿ ಅವರನ್ನು ಪೂರ್ಣ ಕುಂಭ ಕಲಶ ಹಾಗೂ ಚಂಡೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ದೇವಾಲಯದವರೆಗೆ ಕರೆ ತರಲಾಯಿತು.