ಗೋಣಿಕೊಪ್ಪಲು, ಮೇ ೯: ಅರಣ್ಯದಲ್ಲಿ ತಲತಲಾಂತರಗಳಿAದ ವಾಸವಿದ್ದು ಕಾಡಿನ ಮರ ಗಿಡಗಳು ಹಾಗೂ ಪ್ರಾಣಿ ಪಕ್ಷಿಗಳನ್ನು ದೇವರೆಂದು ನಂಬಿ ನಂತರ ಸರ್ಕಾರದ ಆದೇಶದಂತೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಸಬಾ ಹೋಬಳಿಯ ಮಾಸ್ತಿಗುಡಿ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊAಡಿದ್ದ ನೂರಾರು ಜೇನುಕುರುಬ ಹಾಗೂ ಯರವ ಸಮುದಾಯದ ಆದಿವಾಸಿ ಕುಟುಂಬಗಳು ಇದೀಗ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅಸಮಾಧಾನಗೊಂಡು ತಾವು ತೊರೆದಿದ್ದ ಅರಣ್ಯ ಪ್ರದೇಶಕ್ಕೆ ಮತ್ತೆ ವಾಪಸ್ಸಾಗುತ್ತಿದ್ದಾರೆ. ನಾವು ಹುಟ್ಟಿ ಬೆಳೆದ ಕಾಡಿನಲ್ಲಿಯೇ ನೆಲೆ ನಿಲ್ಲಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ನೂರಾರು

(ಮೊದಲ ಪುಟದಿಂದ) ಆದಿವಾಸಿಗಳು ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಪುರ ಸಮೀಪದ ಅಡುಗುಂಡಿಯ ಅರಣ್ಯ ಗೇಟ್‌ಬಳಿ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು. ೨೦೧೮ ರಂದು ಅಡುಗುಂಡಿಯಲ್ಲಿ ವಾಸವಿದ್ದ ನೂರಾರು ಆದಿವಾಸಿ ಕುಟಂಬಗಳನ್ನು ಮನವೊಲಿಸುವ ಮೂಲಕ ಇಲ್ಲಿನ ಅರಣ್ಯ ಪ್ರದೇಶದಿಂದ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಸಬಾ ಹೋಬಳಿ, ರಾಜೇಗೌಡನ ಹುಂಡಿ ಗ್ರಾಮದ ಸರ್ವೆ ನಂ. ೩೭ರ ಮಾಸ್ತಿಗುಡಿ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಪ್ರತಿಕುಟುಂಬಕ್ಕೆ ೧೫ ಲಕ್ಷದ ಪ್ಯಾಕೇಜಿನಲ್ಲಿ ವ್ಯವಸ್ಥೆ ಕಲ್ಪಿಸಿತ್ತು. ಇದರಿಂದ ತಲತಲಾಂತರಗಳಿAದ ವಾಸವಿದ್ದ ಆದಿವಾಸಿಗಳು ಉತ್ತಮ ಬದುಕು ಕಟ್ಟಿಕೊಳ್ಳಲು ಅರಣ್ಯ ಪ್ರದೇಶವನ್ನು ತೊರೆದಿದ್ದರು.

ಹುಸಿಯಾದ ಭರವಸೆ

ಭಾರತ ಸರ್ಕಾರವು ಪುನರ್ ವಸತಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಅರಣ್ಯ ಮತ್ತು ಪರಿಸರ ಮಂತ್ರಾಲಯವು ಇವರಿಗೆ ಜಮೀನು ಹಾಗೂ ನಿವಾಸದ ಸ್ವಾಧೀನ ಪತ್ರಗಳನ್ನು ನೀಡಿತ್ತು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ ಈ ಕುಟುಂಬಗಳನ್ನು ಪುನರ್ವಸತಿ ಕೇಂದ್ರಕ್ಕೆ ಗುಣಮಟ್ಟದ ಆರ್‌ಸಿಸಿ ಮನೆ, ಮೂರು ಎಕರೆ ಜಮೀನು ಆರಂಭದಲ್ಲಿ ೭೫ ಸಾವಿರ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿ ೨.೫೦ ಲಕ್ಷ ಹಣವನ್ನು ಪ್ಯಾಕೇಜಿನಡಿ ಘೋಷಿಸಿ ಇವುಗಳಿಗೆ ಒಪ್ಪಿಗೆ ಸೂಚಿಸಿದ ಕುಟುಂಬಗಳನ್ನು ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಮೂಲಕ ಕಳುಹಿಸಿಕೊಡಲಾಗಿತ್ತು.

ಅರಣ್ಯ ಇಲಾಖೆಯ ವಿವಿಧ ಅಧಿಕಾರಿಗಳು ಪುನರ್ವಸತಿ ಕೇಂದ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜೀವನ ಸಾಗಿಸುತ್ತಿರುವ ಆದಿವಾಸಿ ಕುಟುಂಬಗಳಿಗೆ ಸರಿಯಾದ ರೀತಿಯಲ್ಲಿ ಭೂಮಿಯನ್ನು ಕುಟುಂಬಗಳಿಗೆ ಖಾತೆ ಮಾಡಿಕೊಡದೆ ಹಾಗೂ ಭೂಮಿಯನ್ನು ಕೃಷಿ ಮಾಡಲು ವ್ಯವಸ್ಥೆ ಮಾಡದ ಬಗ್ಗೆ ಆಗಿಂದ್ದಾಗಿಯೇ ಅರಣ್ಯ ಅಧಿಕಾರಿಗಳ ಹಾಗೂ ಆದಿವಾಸಿಗಳ ಮಧ್ಯೆ ಗಲಾಟೆಗಳು ನಡೆಯುತ್ತಿದ್ದವು. ಅಧಿಕಾರಿಗಳು ಪುನರ್ವಸತಿ ಕೇಂದ್ರಕ್ಕೆ ಆಗಮಿಸಿ ಸೌಲಭ್ಯ ಒದಗಿಸುವ ಬಗ್ಗೆ ಭರವಸೆ ನೀಡುತ್ತ ತೆರಳುತ್ತಿದ್ದರು. ಅಧಿಕಾರಿಗಳು ನೀಡುತ್ತಿದ್ದ ಭರವಸೆಯು ಹುಸಿಯಾಗುತ್ತಿದ್ದಂತೆಯೇ ಎಚ್ಚೆತ್ತ ಆದಿವಾಸಿಗಳು ಇವುಗಳನ್ನು ತೊರೆದು ಮತ್ತೆ ಅರಣ್ಯಕ್ಕೆ ವಾಪಸ್ಸಾಗುವ ನಿರ್ಧಾರ ಕೈಗೊಂಡರು.

ಸೋಮವಾರ ಮುಂಜಾನೆ ವೇಳೆ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಿAದ ಹಾಡಿಯ ಮುಖಂಡರಾದ ಜೇನು ಕುರುಬರ ಟಿ. ಅಯ್ಯಪ್ಪ ಹಾಗೂ ಜೇನುಕುರುಬರ ಎಂ. ಸಣ್ಣಯ್ಯ ಮುಂದಾಳತ್ವದಲ್ಲಿ ಹೊರಟ ನೂರಾರು ಕುಟುಂಬಗಳು ತಂಡೋಪತAಡವಾಗಿ ಜಿಲ್ಲೆಯ ರಾಜಪುರ ಸಮೀಪದ ಅಡುಗುಂಡಿ ಅರಣ್ಯ ಪ್ರದೇಶದತ್ತ ಆಗಮಿಸಿದರು. ಈ ವೇಳೆ ವಿಷಯ ತಿಳಿದಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಮೈಸೂರು-ಹುಣಸೂರು ಭಾಗದ ಹಿರಿಯ ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಪೊಲೀಸರು ಮುಂಜಾಗೃತ ಕ್ರಮವಾಗಿ ಇವರನ್ನು ಅಡುಗುಂಡಿಗೇಟ್ ಬಳಿ ತಡೆದು ಅರಣ್ಯ ಪ್ರದೇಶಕ್ಕೆ ಪ್ರವೇಶ ಮಾಡದಂತೆ ಎಚ್ಚರಿಕೆ ವಹಿಸಿದ್ದರು.

ಗೇಟ್‌ನಲ್ಲಿ ತಡೆ

ಇದರಿಂದ ಅನಿವಾರ್ಯವಾಗಿ ನೂರಾರು ಆದಿವಾಸಿ ಕುಟಂಬಗಳು ಗೇಟ್ ಬಳಿಯೇ ಕುಳಿತುಕೊಂಡು ತಮ್ಮ ಪ್ರತಿಭಟನೆಯನ್ನು ಆರಂಭಿಸಿದವು. ಸ್ಥಳಕ್ಕೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಪ್ರತಿಭಟನೆಯನ್ನು ಕೈಬಿಡುವಂತೆ, ಪುನರ್ವಸತಿ ಕೇಂದ್ರಕ್ಕೆ ತೆರಳುವಂತೆ ಹಾಗೂ ಅಲ್ಲಿಯ ಸಮಸ್ಯೆಗಳನ್ನು ಬಗೆ ಹರಿಸುವ ಬಗ್ಗೆ ಭರವಸೆ ನೀಡಿದರು.

ಅಧಿಕಾರಿಗಳು ನೀಡಿದ ಭರವಸೆಗಳನ್ನು ನಂಬದ ಆದಿವಾಸಿಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.

ಅರಣ್ಯ ಅಧಿಕಾರಿಗಳಿಂದ ಅನ್ಯಾಯ

ಹಾಡಿಯ ಮುಖಂಡರಾದ ಜೆ.ಟಿ. ಅಯ್ಯಪ್ಪ ಮಾತನಾಡಿ, ಮೂಲತಃ ಕೊಡಗಿನವರಾದ ನಮ್ಮನ್ನು ಸಕಲ ವ್ಯವಸ್ಥೆಗಳನ್ನು ಕಲ್ಪಿಸಿ ಕೊಡುವ ಭರವಸೆಯೊಂದಿಗೆ ಮಾಸ್ತಿಗುಡಿಗೆ ಸ್ಥಳಾಂತರ ಮಾಡಿದ್ದರು. ವರ್ಷಗಳು ಕಳೆಯುತ್ತಿದ್ದಂತೆ ಕೊಟ್ಟ ಮಾತಿನಂತೆ ಅರಣ್ಯ ಅಧಿಕಾರಿಗಳು ನಡೆದುಕೊಳ್ಳದೆ ತಮಗೆ ಅನ್ಯಾಯ ಮಾಡಿದ್ದಾರೆ. ಪ್ಯಾಕೇಜ್‌ನಲ್ಲಿದ್ದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಆರು ತಿಂಗಳಿಗೊಮ್ಮೆ ಬದಲಾಗುವ ಅರಣ್ಯ ಅಧಿಕಾರಿಗಳು ನೆಪಗಳನ್ನೇ ಹೇಳುತ್ತ ನಾಲ್ಕು ವರ್ಷಗಳೇ ಕಳೆದಿವೆ. ಮೂರು ಎಕರೆ ಜಮೀನಿಗೆ ಯಾವುದೇ ಆರ್‌ಟಿಸಿ ಇಲ್ಲಿತನಕ ನೀಡಿಲ್ಲ. ಇದರಿಂದ ಯಾವುದೇ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕೃಷಿ ಭೂಮಿಗೆ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದ ಮಾತು ಉಳಿಸಿಕೊಂಡಿಲ್ಲ. ಕೇವಲ ಮನೆ ನಿರ್ಮಿಸಿ ತೆರಳಿದ ಅಧಿಕಾರಿಗಳು ಇಲ್ಲಿಯತನಕ ನಮ್ಮ ಭೂಮಿಯನ್ನು ನಮಗೆ ನೀಡಿಲ್ಲ. ಹಾಗಾಗಿ ಪುನರ್ವಸತಿ ಕೇಂದ್ರವನ್ನು ತೊರೆದು ತಮ್ಮ ತಾಯ್ನಾಡಿಗೆ ಆಗಮಿಸಿದ್ದೇವೆ ಎಂದು ತಿಳಿಸಿದರು.

ಹಾಡಿಯ ಮುಖಂಡ ಸಣ್ಣಯ್ಯ ಮಾತನಾಡಿ, ಪುನರ್ವಸತಿ ಕೇಂದ್ರಕ್ಕೆ ತೆರಳುವ ವೇಳೆ ೧೫ ಲಕ್ಷದ ಪ್ಯಾಕೇಜಿನೊಂದಿಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹತ್ತು ಲಕ್ಷ ಪ್ಯಾಕೇಜನ್ನು ನೀಡುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇದೀಗ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ಪ್ಯಾಕೇಜ್‌ಗಳು ಕೈ ಸೇರಿಲ್ಲ. ನಮ್ಮ ಮಕ್ಕಳ ವಿದ್ಯಾಭ್ಯಾಸ ಗೊಂದಲದಲ್ಲಿದೆ. ಕೊಡಗಿನ ಅರಣ್ಯ ಪ್ರದೇಶದಲ್ಲಿ ಗುಡಿಸಲು ಕಟ್ಟಿಕೊಂಡು ನೆಮ್ಮದಿ ಜೀವನ ಕಂಡುಕೊAಡಿದ್ದೇವು. ಇದೀಗ ನಾಡಿಗೆ ಕರೆದೊಯ್ದು ನಂತರ ನಮ್ಮ ಪರಿಸ್ಥಿತಿ ಆಯೋಮಯವಾಗಿದೆ. ಯಾರೂ ಕೂಡ ನಮ್ಮನ್ನು ವಿಚಾರಿಸುವವರೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ಮುಖಂಡರಾದ ಪಿ.ಬಿ. ಈರಪ್ಪ, ರಾಜು ಸೇರಿದಂತೆ ಇನ್ನಿತರ ಪ್ರಮುಖರು, ಮಹಿಳೆಯರು ಭಾಗವಹಿಸಿದ್ದರು.

ಆಹಾರ ನೀಡಲಾಗುತ್ತಿದೆ

ಗಿರಿಜನ ಕಲ್ಯಾಣ ಇಲಾಖೆ ವತಿಯಿಂದ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿರುವ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕುರಿ, ಮೇಕೆ, ಹಸುಗಳ ಘಟಕಗಳನ್ನು ಒದಗಿಸಲಾಗಿದೆ, ಇಲ್ಲಿರುವ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಸಿಗುವ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಪ್ರತಿ ಕುಟುಂಬಕ್ಕೆ ರೆವೆನ್ಯೂ ಖಾತೆಗಳು ಲಭ್ಯವಾದ ನಂತರ ಇತರ ವೈಯಕ್ತಿಕ ಸೌಲಭ್ಯಗಳು ಪಡೆಯಲು ಅರ್ಹರಾಗಿರುತ್ತಾರೆ ಎಂದು ಗಿರಿಜನ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ಪ್ರಭಾ ತಿಳಿಸಿದರು.

ಅಡುಗುಂಡಿಯ ಬಳಿ ಹುಣಸೂರು ಅರಣ್ಯ ಇಲಾಖೆ ಮೇಟಿಕುಪ್ಪೆ ಎಸಿಎಫ್ ಮಹದೇವ, ನಾಗರಹೊಳೆ ವನ್ಯಜೀವಿ ಭಾಗದ ಎಸಿಎಫ್ ಗೋಪಾಲ್, ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ ಸತೀಶ್, ಹುಣಸೂರು ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ, ಮೈಸೂರು ಜಿಲ್ಲೆಯ ಐಟಿಡಿಪಿ ಜಿಲ್ಲಾಅಧಿಕಾರಿ ಪ್ರಭಾ, ಹೆಚ್.ಡಿ. ಕೋಟೆ ತಾಲೂಕು ಅಧಿಕಾರಿ ನಾರಾಯಣಸ್ವಾಮಿ, ಸೇರಿದಂತೆ ವೀರಾಜಪೇಟೆ ತಾಲೂಕು ಡಿವೈಎಸ್ಪಿ ನಿರಂಜನ್ ರಾಜೇಅರಸ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಅಗ್ನಿಶಾಮಕ ದಳದ ಸಬ್‌ಇನ್ಸ್ಪೆೆಕ್ಟರ್ ಕಾಳಪ್ಪ ಸೇರಿದಂತೆ ಇತರ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ಹುಣಸೂರು ವನ್ಯಜೀವಿ ಡಿಎಫ್‌ಓ ಮಹೇಶ್ ಕುಮಾರ್ ಅವರು ಭೇಟಿ ನೀಡಿ ಪ್ರತಿಭಟನೆ ಹಿಂಪಡೆಯುವAತೆ ಮನವಿ ಮಾಡಿದರೂ ಕೂಡ ಒಪ್ಪದ ಆದಿವಾಸಿಗಳು ಕೊಡಗು ಹಾಗೂ ಮೈಸೂರು ಜಿಲ್ಲಾಧಿಕಾರಿಗಳು ಸೇರಿದಂತೆ ಅರಣ್ಯ ಸಚಿವರು ಸ್ಥಳಕ್ಕೆ ಭೇಟಿ ನೀಡಬೇಕೆಂದು ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ ಮುಂದುವರಿಸಿದರು.

(ಚಿತ್ರ ವರದಿ: ಹೆಚ್.ಕೆ. ಜಗದೀಶ್)