ಸೋಮವಾರಪೇಟೆ, ಮೇ ೧೦: ಕಳೆದ ಸಾಲಿನ ಮಳೆಹಾನಿ ಪರಿಹಾರ ನಿಧಿ ಸೇರಿದಂತೆ ಶಾಸಕರ ಅನುದಾನದಲ್ಲಿ ಗ್ರಾಮೀಣ ಪ್ರದೇಶಗಳ ರಸ್ತೆ, ಚರಂಡಿ, ತಡೆಗೋಡೆ, ಸೇತುವೆಗಳ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು, ಇವುಗಳು ಸಮರ್ಪಕವಾಗಿ ಅನುಷ್ಠಾನ ಗೊಂಡಿವೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಗ್ರಾಮಗಳಲ್ಲಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ನಂತರ ಇದೀಗ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ತೆರಳುವ ಸಂದರ್ಭ ಸ್ಥಳೀಯರೊಂದಿಗೆ ಶಾಸಕರು ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಕಳೆ ಬಾರಿಯೂ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದ ಶಾಸಕರು ನಿಗದಿತ ಅವಧಿಯೊಳಗೆ ಕೆಲಸಗಳನ್ನು ಮುಗಿಸುವಂತೆ ಅಭಿಯಂತರರಿಗೆ ಸೂಚನೆ ನೀಡಿದ್ದರು. ಆದರೆ ಹಲವಷ್ಟು ಕಾಮಗಾರಿಗಳು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಆದರೂ ಕೆಲ ಅಧಿಕಾರಿಗಳು ಶಾಸಕರಿಗೆ ತಪ್ಪು ಮಾಹಿತಿ ನೀಡಿ ಬಹುತೇಕ ಕಾಮಗಾರಿಗಳು ಮುಕ್ತಾಯಗೊಂಡಿವೆ ಎಂದು ವರದಿ ಒಪ್ಪಿಸುತ್ತಿದ್ದರು.
ಇದನ್ನು ‘ಫ್ಯಾಕ್ಟ್ ಚೆಕ್’ ಮಾಡಲು ಮುಂದಾಗಿರುವ ಶಾಸಕ ರಂಜನ್, ಕಳೆದ ಬಾರಿ ಗ್ರಾಮ ಪಂಚಾಯಿತಿಗಳಿಗೆ ನೀಡಿದ ಅನುದಾನ, ಕಾಮಗಾರಿಗಳ ವಿವರವನ್ನು ಒಳಗೊಂಡ ಮಾಹಿತಿ ಪತ್ರವನ್ನು ಜೊತೆಯಲ್ಲಿಟ್ಟುಕೊಂಡು ಈ ಬಾರಿ ಗ್ರಾಮಗಳಿಗೆ ತೆರಳುತ್ತಿದ್ದಾರೆ.
ವಿಶೇಷ ಅನುದಾನದಡಿ ತಾಲೂಕಿನ ಎಲ್ಲಾ ಗ್ರಾ.ಪಂ.ಗಳಿಗೆ ಅನುದಾನ ನೀಡಿದ್ದು, ಭೂಮಿಪೂಜೆ ನೆರವೇರಿಸಲು ತೆರಳುವ ಸಂದರ್ಭ ಕಳೆದ ಸಾಲಿನ ಅನುದಾನ ಸದ್ಬಳಕೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಕಾಮಗಾರಿ ನಿರ್ವಹಿಸದೇ ಬಿಲ್ ಮಾಡಿಕೊಳ್ಳುವ ಯತ್ನಕ್ಕೆ ತಡೆಹಾಕುವುದು ಹಾಗೂ ಅಧಿಕಾರಿಗಳು ನೀಡುವ ವರದಿಯನ್ನು ಪುನರ್‌ಪರಿಶೀಲಿಸಲು ಈ ಪ್ರಯೋಗ ಉಪಯೋಗವಾಗಿದೆ ಎಂದು ಅರಿತಿರುವ ಶಾಸಕ ರಂಜನ್, ಗ್ರಾಮಸ್ಥರ ಎದುರು ಕಳೆದ ಬಾರಿ ಭೂಮಿಪೂಜೆ ನೆರವೇರಿಸಿದ ಕಾಮಗಾರಿಗಳ ಪಟ್ಟಿಯನ್ನು ಓದಿ ಹೇಳುತ್ತಿದ್ದು, ಆ ಕಾಮಗಾರಿಗಳು ಆಗಿವೆಯೇ? ಅಥವಾ ಇಲ್ಲವೇ? ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಈ ಸಂದರ್ಭ ಅಧಿಕಾರಿಗಳೂ ಸಹ ಸ್ಥಳದಲ್ಲಿಯೇ ಇರುವುದರಿಂದ ತಪ್ಪು ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ. ಇಂತಹ ವಿನೂತನ ಪ್ರಯತ್ನಕ್ಕೆ ಅಪ್ಪಚ್ಚು ರಂಜನ್ ಅವರು ಮುಂದಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದರೂ ಗ್ರಾಮಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಅನುದಾನ ಎಲ್ಲಿ ಹೋಗುತ್ತಿದೆ ಎಂಬ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಸಿಗುತ್ತಿಲ್ಲ. ಕಾಮಗಾರಿ ನಡೆಯುವ ಸಂದರ್ಭ ಕ್ರಿಯಾಯೋಜನೆ ಕೇಳಿದರೂ ಗುತ್ತಿಗೆದಾರರು ಮಾಹಿತಿ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ಕಾಮಗಾರಿ ಪ್ರಗತಿಯ ಬಗ್ಗೆ ಸ್ಥಳೀಯರೆದುರು ಶಾಸಕರೇ ಪ್ರಗತಿ ಪರಿಶೀಲನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಅನುದಾನ ಸೋರಿಕೆಯನ್ನು ತಡೆಗಟ್ಟಬಹುದಾಗಿದೆ ಎಂದು ಒಡೆಯನಪುರ ಗ್ರಾಮದ ಕಿರಣ್ ಅಭಿಪ್ರಾಯಿಸಿದ್ದಾರೆ.
ಕಳೆದ ಸಾಲಿನಲ್ಲಿ ಗ್ರಾಮಗಳಿಗೆ ನೀಡಿದ ಅನುದಾನದ ಪಟ್ಟಿಯ ನಾಲ್ಕೆöÊದು ಪ್ರತಿಗಳನ್ನು ಸ್ಥಳೀಯರಿಗೆ ನೀಡುತ್ತಿರುವ ಶಾಸಕರು, ಅನುದಾನ ಬಿಡುಗಡೆಗೊಂಡ ಕಾಮಗಾರಿಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುವಂತೆ ಗಮನ ಹರಿಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಜಲಜೀವನ್ ಬಗ್ಗೆ ಗಮನ: ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದ್ದು, ಹಲವು ಕಡೆಗಳಲ್ಲಿ ಮುಕ್ತಾಯ ಗೊಂಡಿವೆ. ಆದರೆ ಉದ್ದೇಶಿತ ಯೋಜನೆಯಡಿ ಟ್ಯಾಂಕ್‌ಗಳನ್ನು ನಿರ್ಮಿಸಿರುವುದನ್ನು ಹೊರತು ಪಡಿಸಿದರೆ ಕೆಲವೊಂದು ಗ್ರಾಮಗಳಲ್ಲಿ ಹಳೆಯ ಪೈಪ್‌ಲೈನ್‌ಗಳಿಗೆ ನೀರಿನ ಸಂಪರ್ಕ ನೀಡಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಇದನ್ನು ಪರಿಶೀಲಿಸಲು ಸದ್ಯದಲ್ಲಿಯೇ ಪ್ರವಾಸ ಹಮ್ಮಿಕೊಳ್ಳಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.
- ವಿಜಯ್