ಮಡಿಕೇರಿ, ಮೇ. ೨ : ಯುವಜನತೆಯಲ್ಲಿ ನಾಗರಿಕ ಸೇವಾ ಪರೀಕ್ಷೆಯ ಮಹತ್ವವನ್ನು ತಿಳಿಯಪಡಿಸುವ ಸಲುವಾಗಿ ಸಿ.ಐ.ಟಿ. ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ಮೈಸೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಆರ್. ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷ ಸಿ.ಪಿ. ಬೆಳ್ಳಿಯಪ್ಪ, ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ, ಸಿ.ಐ.ಟಿ. ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ. ಎಂ. ಬಸವರಾಜ್, ಸಿ.ಐ.ಟಿ. ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸಂಯೋಜಕಿ ಡಾ. ಕವಿತ ಪಿ.ಸಿ. ಪಾಲ್ಗೊಂಡಿದ್ದರು.

ಈ ಸಂದರ್ಭ ವಿದ್ಯಾರ್ಥಿಗಳನ್ನು ಹಾಗೂ ಸಭಿಕರನ್ನ ಉದ್ದೇಶಿಸಿ ಮಾತನಾಡಿದ ಚೇತನ್ ಈಗಿನ ವಿದ್ಯಾರ್ಥಿಗಳಲ್ಲಿ ಪದವಿ ಕಲಿಕೆಯ ನಂತರ ಕೆಲಸದಲ್ಲಿ ಆಯ್ಕೆ ಮಾಡಬಹುದಾದ ವಿವಿಧ ರೀತಿಯ ಕ್ಷೇತ್ರಗಳಲ್ಲಿ ನಾಗರಿಕ ಸೇವಾ ಪರೀಕ್ಷೆಯ ಮಹತ್ವವನ್ನು ತಿಳಿಯಪಡಿಸಿದರು. ಈ ಕ್ಷೇತ್ರವನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಇಂತಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಹಾಗೂ ಇದಕ್ಕಾಗಿ ಬೇಕಾಗುವ ಏಕಾಗ್ರತೆ, ಮಾನಸಿಕ ತಯಾರಿಯನ್ನು ವಿವರಿಸಿದರು. ಈ ವೇಳೆ ನಾಗರಿಕ ಸೇವಾ ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಲ್ಲಿ ಇರುವ ಸಂದೇಹ ಹಾಗೂ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಕಾಲೇಜಿನ ಯಾಂತ್ರಿಕ ವಿಭಾಗದ ವಿದ್ಯಾರ್ಥಿ ನೇಹ ದೇಚಮ್ಮ ವಹಿಸಿದರು. ಪ್ರಾರ್ಥನೆಯನ್ನು ಸಿವಿಲ್ ವಿಭಾಗದ ಹರ್ಷಿತ ಪಿ.ಬಿ. ಹಾಗೂ ಗಗನ ವಿ.ಜಿ. ನೆರವೇರಿಸಿದರು. ಮುಖ್ಯ ಅತಿಥಿಯ ಕಿರು ಪರಿಚಯವನ್ನು ಎಲೆಕ್ಟಾçನಿಕ್ಸ್ ವಿಭಾಗದ ಯಾಶಿಕ್ ಹಾಗೂ ವಂದನಾರ್ಪಣೆಯನ್ನು ಕಂಪ್ಯೂಟರ್ ವಿಭಾಗದ ತಕ್ಷ ಗಣಪತಿ ನೆರವೇರಿಸಿದರು.