ಶನಿವಾರಸಂತೆ, ಮೇ.೨: ಅಂಬೇಡ್ಕರ್ ಅವರ ವಿಚಾರಧಾರೆ ಮತ್ತು ಚಿಂತನೆ ಜನಸಾಮಾನ್ಯರಿಗೆ ತಲುಪುವಲ್ಲಿ ಹಿನ್ನಡೆಯಾಗಿದ್ದು, ಯುವ ಜನಾಂಗ ಸಾರ್ವಜನಿಕವಾಗಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಿ.ವಿ. ಹರೀಶ್ ಅಭಿಪ್ರಾಯಪಟ್ಟರು.
ಸಮೀಪದ ಹಾರೆಹೊಸೂರು ಗ್ರಾಮದಲ್ಲಿ ಕೊಡಗು ಪ್ರತಿಷ್ಠಾನ ವತಿಯಿಂದ ನಡೆದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯೋತ್ಸವ ದಲ್ಲಿ ಅವರು ಮುಖ್ಯ ಭಾಷಣಕಾರ ರಾಗಿ ಪಾಲ್ಗೊಂಡು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ನೇತ್ರದಾನಕ್ಕೆ ಹೆಸರು ನೋಂದಾಯಿಸುವ ಕಾರ್ಯವನ್ನು ಆಯೋಜಿಸಲಾಗಿದ್ದು, ನಿವೃತ್ತ ಪ್ರಾಂಶುಪಾಲ ಎಸ್.ಎಂ. ಉಮಾಶಂಕರ್ ಮೊದಲಿಗೆ ತಮ್ಮ ಹೆಸರು ನೋಂದಾಯಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಅಂಬೇಡ್ಕರ್ ಅಭಿಮಾನಿ ಬಳಗದ ನೂರಕ್ಕೂ ಅಧಿಕ ಸದಸ್ಯರು ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿ ಅಂಧರ ಬಾಳಿಗೆ ಬೆಳಕಾಗುವ ಪ್ರತಿಜ್ಞೆ ಮಾಡಿದರು.
ಮುಖ್ಯ ಅತಿಥಿ ತಪೋವನ ಕ್ಷೇತ್ರ ಮನೆಹಳ್ಳಿ ಮಠಾಧೀಶ ಶಿವಲಿಂಗ ಸ್ವಾಮೀಜಿ, ಹಾರೆಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಡಿ. ಗ್ರೂಪ್ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖಂಡ ವಿ. ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ವಕೀಲ ಶಂಕರ್, ಮುಖಂಡ ಬಿ.ಎಸ್. ಅನಂತ್ ಕುಮಾರ್, ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ, ದಸಂಸ ತಾಲೂಕು ಘಟಕದ ಅಧ್ಯಕ್ಷ ಜನಾರ್ಧನ್, ಕಾರ್ಯದರ್ಶಿ ಹೂವಯ್ಯ, ಮೀನಾಕ್ಷಿ, ಭವಾನಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಸಂಜೆ ನಡೆದ ಮುಕ್ತ ಕಬಡ್ಡಿ ಕ್ರೀಡಾಕೂಟದಲ್ಲಿ ೨೦ಕ್ಕೂ ಅಧಿಕ ತಂಡಗಳು ಭಾಗವಹಿಸಿ ದ್ದವು. ಶನಿವಾರಸಂತೆಯ ನಾಸೀರ್ ಫ್ರೆಂಡ್ಸ್ ತಂಡ ಪ್ರಥಮ, ಸಿದ್ದಾಪುರದ ಆರ್‌ಬಿಸಿ ತಂಡ ದ್ವಿತೀಯ, ಸೋಮವಾರಪೇಟೆಯ ಜೀವನ್ ಫ್ರೆಂಡ್ಸ್ ತಂಡ ತೃತೀಯ, ಕೆಳಗಳಲೆಯ ಬಸವೇಶ್ವರ ಯುವಕ ಸಂಘ ಚತುರ್ಥ ಬಹುಮಾನವನ್ನು ಗಳಿಸಿದರು. ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ್, ಮಧು, ಆದರ್ಶ, ಸುನಿಲ್ ಕಾರ್ಯನಿರ್ವಹಿಸಿದರು.