*ಸಿದ್ದಾಪುರ ಮೇ ೨ : ಕಾಡಾನೆಗಳ ಉಪಟಳದಿಂದ ಬೇಸತ್ತಿರುವ ಅಭ್ಯತ್ ಮಂಗಲ ಗ್ರಾಮದ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ. ಕಾಡುಕೋಣಗಳ ಹಿಂಡು ಗ್ರಾಮಕ್ಕೆ ಲಗ್ಗೆ ಇಡುತ್ತಿದ್ದು, ಕೃಷಿ ಫಸಲನ್ನು ನಾಶ ಮಾಡುತ್ತಿದೆ. ಗ್ರೀನ್ ಫೀಲ್ಡ್ ಎಸ್ಟೇಟ್ ಸೇರಿದಂತೆ ಸುತ್ತಮುತ್ತಲ ತೋಟಗಳಲ್ಲಿ ೭ ಕ್ಕೂ ಹೆಚ್ಚು ಕಾಡುಕೋಣಗಳು ಕಂಡು ಬಂದಿದೆ. ಕಾಫಿ, ಬಾಳೆ, ಅಡಿಕೆ ಮತ್ತಿತರ ಬೆಳೆಗಳನ್ನು ಹಾಳು ಮಾಡುತ್ತಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಕಾರ್ಮಿಕರು ತೋಟದ ಕೆಲಸಕ್ಕೆ ಬಾರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿರುವ ಬೆಳೆಗಾರರು ಕಾಡಾನೆ ಮತ್ತು ಕೋತಿಗಳ ಉಪಟಳದ ಜೊತೆಯಲ್ಲೇ ಕಾಡುಕೋಣಗಳು ಕೂಡ ಲಗ್ಗೆ ಇಟ್ಟಿದ್ದು, ಸಾಕಷ್ಟು ನಷ್ಟ ಸಂಭವಿಸಿದೆ ಎಂದು ತಿಳಿಸಿದರು. ತಕ್ಷಣ ಅರಣ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡು ವನ್ಯಜೀವಿಗಳ ದಾಳಿಯನ್ನು ತಡೆಯಬೇಕು ಮತ್ತು ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.