ಮಡಿಕೇರಿ, ಮೇ ೨: ಕೃಷಿ ಭೂಮಿ ಪರಿವರ್ತನೆಗೆ ಇರುವ ನಿರ್ಬಂಧಗಳನ್ನು ತೆಗೆದು ಹಾಕಿ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಸರಕಾರದ ತೀರ್ಮಾನ ಕೊಡಗು ಜಿಲ್ಲೆಗೆ ಆಪತ್ತು ಎಂದು ಕೊಡಗು ಸಂರಕ್ಷಣಾ ವೇದಿಕೆ ಆತಂಕ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ವೇದಿಕೆಯ ಪ್ರಮುಖ ಕರ್ನಲ್ ಚೆಪ್ಪುಡಿರ ಮುತ್ತಣ್ಣ, ಕರ್ನಾಟಕದಾದ್ಯಂತ ಕೃಷಿ ಭೂಮಿಯ ಪರಿವರ್ತನೆಗೆ ಮೂರು ದಿನಗಳಲ್ಲಿ ಅನುಮೋದನೆ ನೀಡಲಾಗುವದು ಎಂದು ಕಂದಾಯ ಸಚಿವ ಆರ್.ಅಶೋಕ್ ಘೋಷಿಸಿದ್ದಾರೆ. ಇದರಿಂದ ಸರಕಾರ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಿದೆ. ಇದು ಕೊಡಗು ಜಿಲ್ಲೆಗೆ ಆಪತ್ತು ಉಂಟುಮಾಡಲಿದೆ, ಕೊಡಗಿನ ಪರಿಸ್ಥಿತಿ ಏನಾಗಬಹು ದೆಂದು ಊಹಿಸಲೂ ಕೂಡ ಸಾಧ್ಯವಿಲ್ಲವೆಂದು ಹೇಳಿದರು. ಕೊಡಗು ಕಾವೇರಿ ನದಿಯ ಪ್ರಮುಖ ಜಲಾನಯನ

(ಮೊದಲ ಪುಟದಿಂದ) ಪ್ರದೇಶವಾಗಿದ್ದು, ಕೊಡಗಿನ ನಗರೀಕರಣವು ಕಾವೇರಿ ನದಿಯ ನೀರಿನ ಹರಿವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮೈಸೂರು, ಬೆಂಗಳೂರು, ಮಂಡ್ಯ ಮತ್ತು ತಮಿಳುನಾಡಿನ ರೈತರು ಸೇರಿದಂತೆ ೮ಕೋಟಿ ಮಂದಿ ನೀರಿಗಾಗಿ ಕಾವೇರಿ ನದಿಯನ್ನು ಅವಲಂಬಿಸಿದ್ದಾರೆ. ಕೊಡಗಿನ ನಗರೀಕರಣದಿಂದ ಕಾವೇರಿ ನದಿಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬದನ್ನು ಬೆಂಗಳೂರಿನ ಭಾರತೀಯ ವೈದ್ಯಕೀಯ ವಿಜ್ನಾನ ಸಂಸ್ಥೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ. ಅಲ್ಲದೆ, ಕೊಡಗಿನಲ್ಲಿ ಭೂ ಪರಿವರ್ತನೆಗೆ ರಾಜ್ಯ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇವೆ, ಆದರೂ ಭೂ ಪರಿವರ್ತನೆ ಮಾಡಲಾಗುತ್ತಿದೆ. ವೈಜ್ಞಾನಿಕ ವರದಿ ಹಾಗೂ ನ್ಯಾಯಾಲಯದ ತಡೆಯಾಜ್ಞೆಯನ್ನು ಸರಕಾರ ಪರಿಗಣನೆಗೆ ತೆಗೆದುಕೊಂಡು ಭೂ ಪರಿವರ್ತನೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ನಿವೇಶನ ಮತ್ತು ಬಡಾವಣೆ ನಿರ್ಮಾಣದ ಉದ್ದೇಶದಿಂದ ಹೊರಗಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿಗೆ ಬರುತ್ತಿದ್ದಾರೆ. ಬಾಂಗ್ಲಾದಿAದ ರೊಹಿಂಗ್ಯಗಳೂ ನುಸುಳುತ್ತಿದ್ದಾರೆ. ಕೊಡಗಿನವರು ಅಲ್ಪಸಂಖ್ಯಾತರಾಗುತ್ತಿದ್ದು, ಇದು ಹೀಗೇ ಮುಂದುವರಿದರೆ ಮುಂದೊAದು ದಿನಗಳಲ್ಲಿ ಕೊಡಗಿನವರ ಧ್ವನಿಯೇ ಇರುವದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರವಾಸೋದ್ಯಮದಿಂದ ತೊಂದರೆ

ಭೂ ಪರಿವರ್ತನೆ ಹಾಗೂ ಪ್ರವಾಸೋದ್ಯಮದಿಂದ ಕೊಡಗು ಜಿಲ್ಲೆಗೆ ಭಾರೀ ತೊಂದರೆಯಾಗಲಿದೆ. ಜಲಾನಯನ ಪ್ರದೇಶಗಳು ನಗರೀಕರಣವಾದರೆ ನಗರಗಳಿಗೆ ನೀರು ಎಲ್ಲಿಂದ ಸಿಗುತ್ತದೆ ಎಂದು ಪ್ರಶ್ನಿಸಿದ ಮುತ್ತಣ್ಣ, ಜಿಲ್ಲೆಯ ಜನಸಂಖ್ಯೆ ೫ರಿಂದ ೬ಲಕ್ಷದಷ್ಟಿದ್ದರೆ, ಜಿಲ್ಲೆಗೆ ವರ್ಷದಲ್ಲಿ ೧೫ಲಕ್ಷದಷ್ಟು ಮಂದಿ ಪ್ರವಾಸಿಗರು ಬರುತ್ತಾರೆ. ಅವರುಗಳಿಗೆ ನೀರು ಎಲ್ಲಿಂದ ಸಿಗಬೇಕು, ಪ್ರವಾಸೋದ್ಯಮಕ್ಕೂ ನಿಯಮಗಳನ್ನು ಹಾಕಬೇಕೆಂದು ಹೇಳಿದರು.

ಬೇನಾಮಿ ಹೆಸರಿನಲ್ಲಿ ಆಸ್ತಿ..?

ಕೆಲವು ರಾಜಕಾರಣಿಗಳು ಕೊಡಗಿನಲ್ಲಿ ಬೇನಾಮಿ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ. ಅವರುಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಭೂ ಪರಿವರ್ತನೆ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಇದನ್ನು ವಿರೋಧಿಸುತ್ತೇವೆ. ಸಮಯ ಬಂದಾಗ ಆಸ್ತಿ ಹೊಂದಿರುವವರ ಹೆಸರು ಬಹಿರಂಗಪಡಿಸಲಾಗುವದೆAದು ಅವರು ಹೇಳಿದರು.

ಪ್ರತಿನಿಧಿಗಳ ನಿಲುವೇನು..?: ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಸುಜಾ ಕುಶಾಲಪ್ಪ ಅವರುಗಳು ಕೊಡಗಿನಲ್ಲಿ ಭೂ ಪರಿವರ್ತನೆಯನ್ನು ವಿರೋಧಿಸುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚುರಂಜನ್ ಅವರುಗಳು ತಮ್ಮ ನಿಲುವು ವ್ಯಕ್ತಪಡಿಸಬೇಕಿದೆ. ಕೊಡಗಿನ ರಕ್ಷಣೆಯ ನಿಟ್ಟಿನಲ್ಲಿ ಬೆಂಬಲ, ಸಹಕಾರ ನೀಡಬೇಕಿದೆ. ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ಗಮನ ಹರಿಸಿ, ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂರಕ್ಷಣಾ ವೇದಿಕೆಯ ಹಂಚೆಟ್ಟಿರ ನಯನ, ಯಶವಂತ್, ಬಿಜೆಪಿ ಯುವ ಮೋರ್ಚಾದ ಟಿ.ಪಿ.ಶರತ್, ಡಾ.ವೀಣಾ ಪೂಣಚ್ಚ ಇದ್ದರು.