ಸೋಮವಾರಪೇಟೆ, ಏ. ೨೯: ಗ್ರಾಮೀಣ ಜನಪದದ ಅವಿಭಾಜ್ಯ ಅಂಗವಾಗಿರುವ ವಾರ್ಷಿಕ ಸುಗ್ಗಿ ಉತ್ಸವಗಳು ಮಲೆನಾಡು ಭಾಗದಲ್ಲಿ ಸಂಭ್ರಮದಿAದ ನಡೆಯುತ್ತಿದ್ದು, ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಸಾವಿರಾರು ಮಂದಿ ಸಾರ್ವಜನಿಕ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಇಂದು ನೆರವೇರಿತು.
ಕೂತಿನಾಡಿಗೆ ಸೇರಿದ ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಚಿಕ್ಕತೋಳೂರು, ಇನಕನಹಳ್ಳಿ, ಸಿಂಗನಳ್ಳಿ, ಹರಪಳ್ಳಿ, ನಡ್ಲಕೊಪ್ಪ, ದೊಡ್ಡಮನೆಕೊಪ್ಪ, ಕಂಬಳ್ಳಿ, ಊರೊಳಗಿನಕೊಪ್ಪ, ಕರಡಿಕೊಪ್ಪ ಸೇರಿದಂತೆ ಸುತ್ತಮುತ್ತಲ ೧೯ ಗ್ರಾಮಗಳ ಗ್ರಾಮಸ್ಥರು ಒಂದೆಡೆ ಸೇರಿ ಗ್ರಾಮ ದೇವತೆಯಾದ ಶ್ರೀ ಸಬ್ಬಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಸುಗ್ಗಿ ಉತ್ಸವ ಸಾವಿರಾರು ಮಂದಿ ಆಸ್ತಿಕರ ಸಮಕ್ಷಮ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ನೆರವೇರಿತು.
ಮಲೆನಾಡು ವ್ಯಾಪ್ತಿಯಲ್ಲಿ ನಡೆಯುವ ಬಹುದೊಡ್ಡ ಉತ್ಸವÀವಾಗಿ ಹೆಸರು ಪಡೆದಿರುವ ಸುಗ್ಗಿ ಉತ್ಸವಕ್ಕೆ ಅಕ್ಕಪಕ್ಕದ ಜಿಲ್ಲೆಯವರೂ ಆಗಮಿಸುವದು ವಿಶೇಷ. ಸುಗ್ಗಿಯ ಕೊನೆಯ ದಿನದಂದು ವಿವಿಧೆಡೆ ನೆಲೆಸಿರುವ ಮಂದಿ ಗ್ರಾಮಕ್ಕೆ ಆಗಮಿಸುವುದರಿಂದ ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿರುತ್ತದೆ.
ತೋಳೂರುಶೆಟ್ಟಳ್ಳಿ ಗ್ರಾಮದ ನಡುಭಾಗದಲ್ಲಿರುವ ಸುಗ್ಗಿಬನದಲ್ಲಿ ನಿರ್ಮಿಸಿರುವ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ಸುಗ್ಗಿ ಕಟ್ಟೆ ಎದುರು ಪ್ರತಿಷ್ಠಾಪಿಸಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸ ಲಾಯಿತು.
ಪುಷ್ಪಗಿರಿ ಬೆಟ್ಟದಲ್ಲಿರುವ ಕುಮಾರಲಿಂಗೇಶ್ವರ ದೇವಾಲಯಕ್ಕೆ ತೆರಳಿ ಮಳೆ ಕರೆಯುವ ಪದ್ಧತಿ ಯೊಂದಿಗೆ ಪ್ರಾರಂಭವಾದ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವದಲ್ಲಿ, ಬೀರೇದೇವರ ಹಬ್ಬ, ಗುಮ್ಮನ ಮರಿ ಪೂಜೆ, ಬಾವಿಗದ್ದೆ ಊಟ, ಊರೊಡೆಯನ ಪೂಜೆ, ಔತಣಮಕ್ಕಿ ಪೂಜೆ, ಕೊಂಡ ಹಾಯುವದು, ಮೊದಲ ಬೇಟೆ, ಊರು ಸುಗ್ಗಿ, ದೇವರ ಗಂಗಾ ಸ್ನಾನ, ಆವರಣ ಶೃಂಗಾರ, ನೆಂಟರ ಸುಗ್ಗಿ, ಹಗಲು ಸುಗ್ಗಿ, ಹೆದ್ದೇವರ ಸುಗ್ಗಿ ಸಾರು ವಿಧಿವಿಧಾನಗಳೊಂದಿಗೆ ಈ ವರ್ಷದ ತೋಳೂರುಶೆಟ್ಟಳ್ಳಿಯ ಹಗಲು ಸುಗ್ಗಿ ಸಂಭ್ರಮದಿAದ ನಡೆಯಿತು. ಮೇ. ೧ರಂದು(ನಾಳೆ) ಹೆದ್ದೇವರ ಬನಕ್ಕೆ ಹಾಲೆರೆಯುವ ಮೂಲಕ ಈ ವರ್ಷದ ಸುಗ್ಗಿಗೆ ವಿಧ್ಯುಕ್ತ ತೆರೆಬೀಳಲಿದೆ.
ಅನಾದಿ ಕಾಲದಿಂದಲೂ ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಈ ಉತ್ಸವವನ್ನು ಆಚರಿಸುತ್ತಿದ್ದು, ಕಳೆದ ೧೫ ದಿನಗಳಿಂದ ಗ್ರಾಮದಲ್ಲಿ ವಿವಿಧ ಕಟ್ಟುಪಾಡುಗಳನ್ನು ಅಳವಡಿಸಲಾಗಿತ್ತು. ಇಂದು ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯ ಸುತ್ತ ಪ್ರದಕ್ಷಿಣೆ ಮಾಡಿ, ಎಡೆ ಸಮರ್ಪಣೆ ನಂತರ ಮೆರವಣಿಗೆ ಮೂಲಕ ದೇವಾಲಯಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಯಿತು.
ಊರಿಗೆ ಸಮಯಕ್ಕೆ ಸರಿಯಾಗಿ ಮಳೆ ಸುರಿದು ಉತ್ತಮ ಬೆಳೆ ಬೆಳೆಯಲಿ, ಜನ ಮತ್ತು ಜಾನುವಾರು ಗಳಿಗೆ ಯಾವದೇ ರೀತಿಯ ತೊಂದರೆ ಯಾಗದಿರಲಿ ಎಂದು ಗ್ರಾಮಸ್ಥರು ಸಾಮೂಹಿಕವಾಗಿ ಪ್ರಾರ್ಥಿಸಿದರು.
ಶುಕ್ರವಾರದಂದು ಸಬ್ಬಮ್ಮ ದೇವಿಯ ಸನ್ನಿಧಿಯಲ್ಲಿ ಹಣ್ಣು ಕಾಯಿ ಹಾಗೂ ಮಡೇ ಉತ್ಸವ ನಡೆಯಿತು. ಗ್ರಾಮಸ್ಥರು ದೇವರಿಗೆ ಎಡೆಯನ್ನಿರಿಸಿ ಪೂಜೆ ಸಲ್ಲಿಸಿದರು. ನಂತರ ಉತ್ಸವ ಮೂರ್ತಿಯನ್ನು ಸುಗ್ಗಿಕಟ್ಟೆಯ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕುವ ಸಂದರ್ಭ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಈಡುಗಾಯಿ ಸೇವೆ ಸಲ್ಲಿಸಿದರು.
ಗ್ರಾಮಸ್ಥರಿಂದ ಮೂಡಿಬಂದ ಸಾಂಪ್ರದಾಯಿಕ ಸುಗ್ಗಿ ಕುಣಿತ ಗ್ರಾಮೀಣ ಸೊಗಡಿನ ಜನಪದದ ಜೀವನ ಕ್ರಮವನ್ನು ಬಿಂಬಿಸುತ್ತಿತ್ತು. ಸುಗ್ಗಿ ಹಬ್ಬದ ಉಸ್ತುವಾರಿಯನ್ನು ಸಮಿತಿಯ ಅಧ್ಯಕ್ಷ ರಾಜಗೋಪಾಲ್, ಕಾರ್ಯದರ್ಶಿ ಡಿ.ಎಲ್.ಜಗದೀಶ್, ಖಜಾಂಚಿ ಮನೋಹರ್, ಎಸ್.ಜಿ. ರವೀಂದ್ರ, ಟಿ.ಆರ್. ರಂಜನ್, ಹೆಚ್.ಪಿ. ಕೊಮಾರಪ್ಪ, ಹೆಚ್.ಟಿ. ಸೋಮಯ್ಯ, ವಿ.ಡಿ. ವಿಜಯ್, ವಿಠಲ್‌ರಾಜ್, ಡಿ.ಎಂ. ಲಿಂಗರಾಜ್, ಡಿ.ಜಿ. ಚಂದ್ರಶೇಖರ್, ಎಸ್.ಪಿ. ಈರಯ್ಯ, ಬೋಜರಾಜ್, ರವಿ ಸೇರಿದಂತೆ ಗ್ರಾಮದ ಪ್ರಮುಖರು ವಹಿಸಿದ್ದರು.
ಸುಗ್ಗಿ ಆಚರಣೆಯಲ್ಲಿ ವಿಶೇಷ ಪ್ರಾಮುಖ್ಯತೆ ಪಡೆದಿರುವ, ರಾಜ್ಯ ಮಟ್ಟದಲ್ಲಿ ಸುಗ್ಗಿ ಕುಣಿತ ಪ್ರದರ್ಶಿಸಿ ಗುರುತಿಸಿಕೊಂಡಿರುವ ಗ್ರಾಮದ ಎಸ್.ಪಿ. ಮಾಚಯ್ಯ, ಎಚ್.ಕೆ. ಬಸವರಾಜು, ಪ್ರಸಾದ್, ಮೋಹನ್ ರಾಜ್, ಪ್ರಶಾಂತ್ ಮತ್ತು ತಂಡದವರು ಸಾಂಪ್ರದಾಯಿಕ ಧಿರಿಸಿನೊಂದಿಗೆ ಸುಗ್ಗಿ ಕುಣಿತವನ್ನು ಪ್ರದರ್ಶಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಉದ್ಯಮಿ ಗಿರೀಶ್ ಮಲ್ಲಪ್ಪ, ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಮಂದಿ ಭಕ್ತಾದಿಗಳು ಸುಗ್ಗಿ ಉತ್ಸವದಲ್ಲಿ ಭಾಗವಹಿಸಿದ್ದರು. ದೇವಾಲಯದ ಗರ್ಭಗುಡಿ ನಿರ್ಮಾಣಕ್ಕೆ ಸಹಕಾರ ನೀಡಿದ ಹರಿಣಿ ಕರಿಗೌಡ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
-ವಿಜಯ್