ಕೊಡ್ಲಿಪೇಟೆ, ಏ. ೨೭: ರಾಜಕೀಯ ಶಕ್ತಿಗಾಗಿ ಮೂಲ ನಿವಾಸಿಗಳು ಸಂಘಟಿತರಾಗಬೇಕು ಎಂದು ಪ್ರಗತಿಪರ ಚಿಂತಕ ಭಾಸ್ಕರ್ ಪ್ರಸಾದ್ ಹೇಳಿದರು.
ಕೊಡ್ಲಿಪೇಟೆ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ವತಿಯಿಂದ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾಗಿದ್ದ ಅಂಬೇಡ್ಕರ್ ಅವರ ೧೩೧ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ ಶಕ್ತಿ ಎಂಬುದು ಎಲ್ಲಾ ಹಕ್ಕು-ಸವಲತ್ತುಗಳು ತುಂಬಿರುವ ಭದ್ರ ಕೊಠಡಿಯಾಗಿದೆ. ಯಾವ ಸಮುದಾಯ ರಾಜಕೀಯ ಹಕ್ಕು ಅಧಿಕಾರದಿಂದ ವಂಚಿತ ವಾಗಿದೆಯೋ ಆ ಸಮುದಾಯ ಅಭಿವೃದ್ಧಿಯಾಗುವುದಿಲ್ಲ ಎಂದು ಬಾಬ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಆದ್ದರಿಂದ ಈ ನೆಲದ ಮೂಲ ನಿವಾಸಿಗಳಾದ ದಲಿತ ಮತ್ತು ಮುಸ್ಲಿಮರು ಹಾಗೂ ಶೋಷಿತರು ಒಂದಾಗಿ ರಾಜಕೀಯವಾಗಿ ಶಕ್ತರಾಗಬೇಕು ಎಂದು ಭಾಸ್ಕರ್ ಪ್ರಸಾದ್ ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಗತಿಪರ ಚಿಂತಕ ಪ್ರಭುಸ್ವಾಮಿ ಟಿ.ನರಸಿಪುರ ಮಾತನಾಡಿ, ಈ ದೇಶದಲ್ಲಿ ವಾಸ ಮಾಡುವ ಪ್ರತಿಯೊಬ್ಬರಿಗೂ ಸಮಾನತೆ ಸಾರುವ ಸಂವಿಧಾನವನ್ನು ನೀಡಿ ಇಂದು ೧೩೫ ಕೋಟಿ ಜನರು ವಿದ್ಯೆ ಕಲಿಯುವ ಅವಕಾಶ ಕಲ್ಪಿಸಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಡಿ.ವಿ. ಜಗದೀಶ್ ವಹಿಸಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿಲ್ಪಾ, ಜನ್ಮ ದಿನಾಚರಣೆ ಸಮಿತಿ ಖಜಾಂಜಿ ಡಿ.ಎನ್. ವಸಂತ್, ದಲಿತ ಮುಖಂಡರುಗಳಾದ ಜಯಪ್ಪ ಹಾನಗಲ್, ವಕೀಲರಾದ ಜಯೇಂದ್ರ, ದಿವಾಕರ್, ಸುರೇಶ್, ಕೆ.ಬಿ. ರಾಜು, ಮೋಹನ್ ಮೌರ್ಯ, ವಿಮಲಾಕ್ಷಿ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಪ್ಸರ್, ಹ್ಯಾಂಡ್‌ಪೋಸ್ಟ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಸುಲೈಮಾನ್, ಜಾಮಿಯಾ ಮಸ್ಜಿದ್ ಅಧ್ಯಕ್ಷ ಮುಷರತ್ ಬಾಷ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಾಂತಕುಮಾರ್ ನೇತೃತ್ವದ ಮಾನವತಾ ಕಲಾ ತಂಡದ ಸದಸ್ಯರು ಭೀಮ ಗೀತೆಗಳನ್ನು ಹಾಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್‌ರವರ ಭಾವಚಿತ್ರ ವನ್ನೊಳಗೊಂಡ ಸ್ತಬ್ಧಚಿತ್ರಗಳಿದ್ದ ರಥಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಗಾರಿ ಬಡಿತ ಹಾಗೂ ಡೊಳ್ಳು ಕುಣಿತ ಒಳಗೊಂಡAತೆ ದೊಡ್ಡಕುಂದ ವೃತ್ತದಿಂದ ಕೊಡ್ಲಿಪೇಟೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಹ್ಯಾಂಡ್‌ಪೋಸ್ಟ್ ನೂರ್ ಯೂತ್ ಸಮಿತಿಯ ಯುವಕರು ದ್ವಿಚಕ್ರ ವಾಹನಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜಾಮೀಯ ಮಸ್ಜಿದ್ ವತಿಯಿಂದ ತಂಪು ಪಾನೀಯ ವಿತರಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ, ಕಾಂಗ್ರೆಸ್ ಮುಖಂಡರಾದ ಮಂತರ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತ್ ಕುಮಾರ್, ಅರಣ್ಯ ಇಲಾಖೆಯ ಗೋವಿಂದರಾಜ್, ಪಂಚಾಯತ್ ಕಾರ್ಯದರ್ಶಿ ಹೂವಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಔರಂಗಜೇಬ್ ಸಮಿತಿ ಕಾರ್ಯದರ್ಶಿ ಜೆ.ಎಲ್. ಜನಾರ್ದನ್ ಭಾಗವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಶೋಭಿತ್ ಗೌಡ, ವಕೀಲರಾದ ದೌಲತ್ ಹುಸೇನ್, ದಲಿತ ಮುಖಂಡ ನಿರ್ವಾಣಪ್ಪ, ಗ್ರಾ.ಪಂ. ಸದಸ್ಯರಾದ ಪ್ರಸನ್ನ, ಅಶ್ವಿನಿ ಮಂಜುನಾಥ್, ಸುನಂದಾ, ಪ್ರಮುಖರಾದ ಕೆಂಚೇಶ್ವರ, ಸೋಮಣ್ಣ, ವಿಜಯ್, ಕಾಳಪ್ಪ ಮಾಸ್ಟರ್, ವಿನಯ್, ಕ.ರ.ವೇ ಅಧ್ಯಕ್ಷ ಭೂಪಾಲ್, ಸಾಮಾಜಿಕ ಕಾರ್ಯಕರ್ತರಾದ ಇಂದ್ರೇಶ್, ರೇವಣ್ಣ ಹಾಜರಿದ್ದರು.