*ಗೋಣಿಕೊಪ್ಪ, ಏ. ೨೭: ಜೇನುಕುರುಬ ಕುಟುಂಬಗಳ ನಡುವಿನ ೪ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚಾಲನೆ ದೊರೆಯಿತು. ಜೇನುಕುರುಬರ ಕಟ್ಟೆಮನೆ ತಾಯಿ ಮನೆತನದ ಕುಟುಂಬಸ್ಥರು ನಡೆಸುತ್ತಿರುವ ಕ್ರಿಕೇಟ್ ಪಂದ್ಯಾಟ ೫ ದಿನಗಳ ಕಾಲ ನಡೆಯಲಿದೆ.

ಸುಮಾರು ೬೫ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು, ಕ್ರಿಕೆಟ್ ಸಂಭ್ರಮವನ್ನು ಅನುಭವಿಸಲಿದ್ದಾರೆ. ಕ್ರಿಕೆಟ್ ಪಂದ್ಯಾಟಕ್ಕೆ ಹುಣಸೂರು ವಿಭಾಗದ ಜೇನುಕುರುಬ ಸಂಘದ ಅಧ್ಯಕ್ಷ ರಾಜಪ್ಪ ಅವರು ಮುಖ್ಯ ಅತಿಥಿ ಮೈಸೂರು ವಿಭಾಗ ಉಪಾಧ್ಯಕ್ಷ ಚಂದ್ರು ಅವರು ಎಸೆದ ಚೆಂಡಿಗೆ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು.

ಪಂದ್ಯಾಟದ ಪ್ರಾರಂಭಕ್ಕೂ ಮುನ್ನ ಜೇನುಕುರುಬ ಜನಾಂಗದ ಕಾಡುದೇವರಿಗೆ ಪೂಜೆ ಸಲ್ಲಿಸಿ ಕ್ರೀಡಾಕೂಟ ಸುಗಮವಾಗಿ ನಡೆಯಲೆಂದು ಆಯೋಜಕರು ಹಾಗೂ ಅಥಿತಿಗಳು, ಕ್ರೀಡಾ ಕೂಟದಲ್ಲಿ ಭಾಗವಹಿಸುವ ತಂಡ ಪ್ರಾರ್ಥಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹುಣಸೂರು ಜೇನುಕುರುಬ ಸಂಘದ ಅಧ್ಯಕ್ಷ ರಾಜಪ್ಪ ಮಾತನಾಡಿ, ಜೇನುಕುರುಬ ಸಮುದಾಯವರು ಸಂಘಟನಾತ್ಮಕವಾಗಿ ಬಲ ಹೊಂದಬೇಕಾಗಿದೆ. ನಮ್ಮ ಹಕ್ಕಿಗಾಗಿ ನಾವು ಹೋರಾಡಲು ಶಿಕ್ಷಣವಂತರಾಗಬೇಕಾಗಿದೆ. ಮೈಸೂರು ಮತ್ತು ಕೊಡಗು ಭಾಗದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಜೇನುಕುರುಬ ಸಮುದಾಯ ವಾಸಿಸುತ್ತಿದ್ದಾರೆ. ಸರ್ಕಾರ ಇವರನ್ನು ವಿಶೇಷವಾಗಿ ಪರಿಗಣಿಸಿ ಸಮುದಾಯದ ಸಂಸ್ಕöÈತಿ, ಆಚಾರ, ವಿಚಾರಗಳಿಗೆ ಹೆಚ್ಚಿನ ಪ್ರೋತ್ಸಾಹ ಧನ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಮುಖ್ಯ ಅಥಿತಿಯಾಗಿ ಭಾಗವಹಿಸಿದ ಮೈಸೂರು ವಿಭಾಗದ ಜೇನುಕುರುಬ ಸಂಘದ ಉಪಾಧ್ಯಕ್ಷ ಚಂದ್ರು ಮಾತನಾಡಿ ಸರ್ಕಾರ ಜೇನುಕುರುಬರಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನ ಗೊಳಿಸಿದರೂ ಸಮರ್ಪಕವಾಗಿ ಸಮುದಾಯಕ್ಕೆ ತಲುಪುವಲ್ಲಿ ವಿಫಲ ವಾಗಿದೆ. ಸರ್ಕಾರ ಯೋಜನೆಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಸಮುದಾಯದ ಪೀಳಿಗೆ ಶಿಕ್ಷಣ ವಂತರಾಗಬೇಕೆAದು ಕರೆ ನೀಡಿದರು.

ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್ ಮುಖ್ಯ ಅಥಿತಿಗಳಾಗಿ ಮಾತನಾಡಿ ಜೇನುಕುರುಬ ಸಮುದಾಯದಲ್ಲಿ ಪ್ರತಿಭಾವಂತ ಯುವಕರು ಇದ್ದಾರೆ. ಸರಿಯಾದ ವೇದಿಕೆ ದೊರಕದೆ ಇರುವುದರಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಸಮುದಾಯದ ಪ್ರತಿಯೊಬ್ಬರು ಶಿಕ್ಷಿತರಾಗಬೇಕಾಗಿದೆ. ಸಮುದಾಯದ ನಡುವೆ ಈ ರೀತಿಯ ಕ್ರೀಡಾಕೂಟಗಳು ನಡೆಯುವುದರಿಂದ ಒಗ್ಗಟ್ಟಿನ ಬಲ ಪ್ರದರ್ಶನವಾಗಲಿದೆ. ಮತ್ತು ಆ ಸಮುದಾಯದ ಅಸ್ಥಿತ್ವವನ್ನು ಸಮಾಜಕ್ಕೆ ತೋರಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಪ್ರೋಸ್, ಮೈಸೂರು ಜಿಲ್ಲಾ ಖಜಾಂಚಿ ಶಿವಣ್ಣ, ಡಿ.ಎಸ್.ಎಸ್ ಮುಖಂಡ ಕಿರಣ್ ಗುರುಸ್ವಾಮಿ, ತಾಲೂಕು ಉಪಾಧ್ಯಕ್ಷ ವಿನೋದ್‌ಕುಮಾರ್, ತಿತಿಮತಿ ಜೇನುಕುರುಬ ಯುವಕ ಸಂಘದ ಅಧ್ಯಕ್ಷ ರಘು, ಉಪಾಧ್ಯಕ್ಷ ಮನು ಕಾರ್ಯದರ್ಶಿ ಜೆ.ಟಿ. ಅಯ್ಯಪ್ಪ, ಸದಸ್ಯ ಅವಿನಾಶ್, ಕರ್ಣ, ಸುರೇಶ್, ತಿತಿಮತಿ ನಿವಾಸಿ ಮುಸ್ತಫ ಉಪಸ್ಥಿತರಿದ್ದರು.