*ಗೋಣಿಕೊಪ್ಪ, ಏ. ೨೭: ಕುರಿ ಮತ್ತು ಆಡು ಸಾಕಾಣೆಯ ಮೂಲಕ ಆರ್ಥಿಕ ಪ್ರಗತಿಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ವಾಲ್ಮೀಕಿ ನಿಗಮ ಘಟಕ ಮತ್ತು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಆವರಣದಲ್ಲಿ ಗಿರಿಜನ ಫಲಾನುಭವಿಗಳಿಗೆ ಆಡು ಮತ್ತು ಕುರಿಗಳನ್ನು ವಿತರಿಸಿ ಮಾತನಾಡಿದರು.
ಕುರಿ ಸಾಕಾಣೆಯಿಂದ ಮಾಂಸೋಧ್ಯಮ ಬೆಳೆಯಲು ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ರೈತನ ಆರ್ಥಿಕ ಸ್ಥಿತಿಯು ಸುಧಾರಣೆಗೊಳ್ಳಲು ಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಿರಿಜನರು ಸಹ ಹೈನುಗಾರಿಕೆಯಲ್ಲಿ ಪ್ರಗತಿಯನ್ನು ಕಾಣಬೇಕು ಎಂಬ ಚಿಂತನೆಯಲ್ಲಿ ಕುರಿ ಮತ್ತು ಆಡುಗಳ ವಿತರಣೆ ಕಾರ್ಯ ನಡೆಯುತ್ತಿದೆ. ತಾಲೂಕಿನ ಆಯ್ದ ೨೩ ಫಲಾನುಭವಿಗಳಿಗೆ ತಲಾ ೪ ಕುರಿಗಳಂತೆ ವಾಲ್ಮೀಕಿ ನಿಗಮ ಘಟಕದಿಂದ ವಿತರಣೆ ಮಾಡಲಾಗಿದೆ. ಅಲ್ಲದೇ ೯ ಆಡುಗಳನ್ನು ಪರಿಶಿಷ್ಟ ವರ್ಗ ಇಲಾಖೆಯಿಂದ ನೀಡಲಾಗುತ್ತಿದೆ. ಜೊತೆಗೆ ಅವುಗಳಿಗೆ ಬೇಕಾದ ಆಹಾರವನ್ನು ಒದಗಿಸುವ ಕಾರ್ಯವು ನಡೆಯುತ್ತಿದ್ದು, ಇದರ ಸದುಪಯೋಗದ ಫಲವನ್ನು ಗಿರಿಜನ ಬಂಧುಗಳು ಅನುಭವಿಸಬೇಕು ಎಂದು ತಿಳಿಸಿದರು. ಜಿಲ್ಲಾ ವಾಲ್ಮೀಕಿ ಘಟಕದ ನಿರ್ದೇಶಕ ಚಂದ್ರಶೇಖರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ಪರಿಶಿಷ್ಟ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ತಾಲೂಕು ಪಶುವೈದ್ಯಾಧಿಕಾರಿ ತಮ್ಮಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧುದೇವಯ್ಯ ಹಾಗೂ ಫಲಾನುಭವಿಗಳು ಹಾಜರಿದ್ದರು.