ಗೋಣಿಕೊಪ್ಪಲು, ಏ. ೨೭: ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ರೀತಿಯ ಕೆಲಸ ನಿರ್ವಹಿಸುವ ಕಾರ್ಮಿಕರು ಇತ್ತೀಚಿನ ದಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇಂತಹ ಕಾರ್ಮಿಕರಿಗೆ ನ್ಯಾಯ ದೊರಕಿಸಲು ಕಾರ್ಮಿಕ ಸಂಘ ತೀರ ಅಗತ್ಯವೆಂದು ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು ತಿಳಿಸಿದರು.
ಗೋಣಿಕೊಪ್ಪಲುವಿನ ಮಹಿಳಾ ಸಮಾಜದ ಆವರಣದಲ್ಲಿ ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಆಯೋಜನೆಗೊಂಡಿದ್ದ ಪೊನ್ನಂಪೇಟೆ ತಾಲೂಕು ಸಮ್ಮೇಳನದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕರಿಗಾಗಿ ತನ್ನದೆ ಆದ ಇಲಾಖೆ ಇದೆ. ಇಲಾಖೆ ವತಿಯಿಂದ ಕಾರ್ಮಿಕರು ಹೆಚ್ಚಿನ ಸೌಲಭ್ಯವನ್ನು ಪಡೆಯುವ ಅವಕಾಶವಿದೆ. ಆದ್ದರಿಂದ ಕಾರ್ಮಿಕರು ಒಗ್ಗಟ್ಟಿನಿಂದ ಸಂಘಟನೆಯ ಹೋರಾಟದ ಮೂಲಕ ಪ್ರಯೋಜನವನ್ನು ಪಡೆಯುವಂತಾಗಬೇಕು ಎಂದರು.
ಜಿಲ್ಲಾಸAಘದ ಗೌರವ ಅಧ್ಯಕ್ಷರು, ಹಿರಿಯ ವಕೀಲ ಟಿ.ಆರ್. ಪ್ರಮೋದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕ ಸಂಘದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮಹೇಶ್ ಮಾತನಾಡಿ, ಪ್ರತಿನಿತ್ಯ ಕಾರ್ಮಿಕರು ತಮ್ಮ ದೈನಂದಿನ ಕೆಲಸವನ್ನು ಭಯದ ವಾತವರಣದಿಂದಲೇ ಆರಂಭಿಸಬೇಕು. ಕಾರ್ಮಿಕರಿಗೆ ಯಾವುದೇ ಭದ್ರತೆಯಿಲ್ಲದಂತಾಗಿದೆ. ಹೀಗಾಗಿ ಸಂಘಟನೆ ಮೂಲಕ ಗುರುತಿಸಿಕೊಂಡು ಕಾರ್ಮಿಕರು ತಮ್ಮ ಭದ್ರತೆಯನ್ನು ಮಾಡಿಕೊಳ್ಳಬೇಕು ಹಾಗೂ ಕಾರ್ಮಿಕ ಸಂಘದಿAದ ಸಿಗುವ ಸೌಲಭ್ಯವನ್ನು ಪಡೆಯಬೇಕು ಎಂದರು.
ಗೌರವ ಅಧ್ಯಕ್ಷರು, ಹಿರಿಯ ವಕೀಲರಾದ ಟಿ.ಆರ್. ಪ್ರಮೋದ್ ಮಾತನಾಡಿ, ಸಂಘಟನೆ ಮೂಲಕ ೧೩ಕ್ಕೂ ಹೆಚ್ಚು ಸೌಲಭ್ಯಗಳನ್ನು ಕಾರ್ಮಿಕರ ಇಲಾಖೆಯಿಂದ ಪಡೆದಿದ್ದೇವೆ. ಇನ್ನಷ್ಟು ಪ್ರಯೋಜನವನ್ನು ಪಡೆಯಲು ಹೋರಾಟ ರೂಪಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಸಂಘಟನೆಯು ಬಲಿಷ್ಠವಾದಲ್ಲಿ ಯೋಜನೆಯ ಲಾಭ ಪಡೆಯಲು ಅನುಕೂಲವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಸಿಐಟಿಯು ಕಾರ್ಮಿಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಎನ್.ಡಿ. ಕುಟ್ಟಪ್ಪ, ಖಜಾಂಚಿ ಸಿ.ಎ. ಹಮೀದ್, ಸದಸ್ಯರಾದ ಕೆ.ಕೆ. ಹರಿದಾಸ್, ಬಿ.ಎಂ. ಸುರೇಶ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಸದಸ್ಯೆ ಮಂಜುಳ ಮಾತನಾಡಿದರು. ಈ ವೇಳೆ ಪೊನ್ನಂಪೇಟೆ ತಾಲೂಕಿನ ಕಟ್ಟಡ ಕಾರ್ಮಿಕರ ಸಂಘದ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾಗಿ ಅರುವತ್ತೋಕ್ಲು ಗ್ರಾ.ಪಂ. ಸದಸ್ಯ ಎಂ. ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಬಿ. ಪಳನಿಸ್ವಾಮಿ, ಕಾರ್ಯದರ್ಶಿಯಾಗಿ ಹೆಚ್.ಆರ್. ರಾಮಕೃಷ್ಣ ಸೇರಿದಂತೆ ೨೦ಕ್ಕೂ ಅಧಿಕ ಪದಾಧಿಕಾರಿಗಳನ್ನು ಈ ಸಂದರ್ಭ ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಥೋಮಸ್, ಕೆ.ಕೆ. ರಮೇಶ್, ವಸಂತಿ ಪಿ.ಡಿ., ಕಾರ್ಯದರ್ಶಿಗಳಾಗಿ ರಂಜಿತ್, ಕೆ. ರಾಜ, ಮೋಹನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಜಿ, ರಶೀದ್, ಎಸ್.ಎಂ. ನೇತ್ರಾವತಿ, ಸುರೇಂದ್ರ ಪಿ. ಗಣೇಶನ್‌ರವರನ್ನು ನೇಮಕ ಮಾಡಲಾಯಿತು. ಹೆಚ್.ಬಿ. ಪಳನಿಸ್ವಾಮಿ ಸ್ವಾಗತಿಸಿ, ಹೆಚ್.ಆರ್. ರಾಮಕೃಷ್ಣ ವಂದಿಸಿದರು. ತಾಲೂಕಿನ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.