ಮಡಿಕೇರಿ, ಏ. ೨೭: ಸುಳ್ಯದ ರಂಗ ಮಯೂರಿ ನೃತ್ಯ ಶಾಲೆ ಮತ್ತು ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ವತಿಯಿಂದ ಮಡಿಕೇರಿಯಲ್ಲಿ ಹಮ್ಮಿಕೊಂಡಿರುವ ಮಕ್ಕಳ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ ೨೦೨೨’ಕ್ಕೆ ಭಾನುವಾರ ಚಾಲನೆ ನೀಡಲಾಗಿದೆ.
ಗದ್ದುಗೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಬೆಕಲ್ ನವೀನ್ ಶಿಬಿರಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪೋಷಿಸುವ ನಿಟ್ಟಿನಲ್ಲಿ ರಂಗಮಯೂರಿ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆ ಕಾರ್ಯಕ್ರಮವನ್ನು ಪುರಾತತ್ವ ಇಲಾಖೆಯ ಕ್ಯುರೇಟರ್ ರೇಖಾ ಉದ್ಘಾಟಿಸಿದರು. ಸಿಗ್ನೇಚರ್ ಡಾನ್ಸ್ ಕಂಪೆನಿಯ ವಿನೋದ್ ಕರ್ಕೆರ, ಕಿಂಗ್ಸ್ ಆಫ್ ಕೂರ್ಗ್ ಸಂಸ್ಥೆಯ ಕೊರಿಯೋಗ್ರಾಫರ್ ಮಹೇಶ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶಿಬಿರಕ್ಕೆ ಶುಭ ಕೋರಿದರು. ಭಾನುವಾರದಿಂದ ಆರಂಭವಾಗಿರುವ ಶಿಬಿರ ಮೇ ೧ ರವರೆಗೆ ಗದ್ದುಗೆ ಆವರಣದಲ್ಲಿ ನಡೆಯಲಿದೆ. ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆವರೆಗೆ ನಡೆಯುವ ಶಿಬಿರದಲ್ಲಿ ಯೋಗ, ಭಜನೆ, ಹಾಡು, ನಾಟಕ, ನೃತ್ಯ ಕಲಿಕೆ ಜತೆಗೆ ಕೊಡಗಿನ ಐತಿಹಾಸಿಕ ಸ್ಥಳಗಳ ಮಹತ್ವದ ಬಗ್ಗೆ ತಿಳಿಸಿಕೊಡಲಾಗುತ್ತದೆ ಎಂದು ರಂಗಮಯೂರಿಯ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿರುವ ಮಹೇಶ್ ಆಚಾರಿ ಹೊನ್ನಾವರ, ಶುಭಕರ್ ಪುತ್ತೂರು, ಹೇಮಂತ್ ಕುಮಾರ್ ಬೆಂಗಳೂರು, ಪ್ರಸನ್ನ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ ಕಲಿತಕಲಾ ಪ್ರಕಾರಗಳ ಪ್ರದರ್ಶನ ಮೇ ೧ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನಗೊಳ್ಳಲಿದೆ.
ಮೇಘಾ ಕೃಷ್ಣ ಪ್ರಾರ್ಥಿಸಿದರೆ, ಸುನಂದಾ ಶೆಟ್ಟಿ ವಂದಿಸಿದರು. ಮಿಲನಾ ಭರತ್ ಕಾರ್ಯಕ್ರಮ ನಿರೂಪಿಸಿದರು.