ವೀರಾಜಪೇಟೆ, ಏ. ೨೭: ನೌಕರರನ್ನು ಖಾಯಂ ನೌಕರರೆಂದು ಗುರುತಿಸಿ ಸರ್ಕಾರ ಶಾಸನಾತ್ಮಕ ಸೌಲಭ್ಯಗಳನ್ನು ಜಾರಿ ಮಾಡಬೇಕು, ಬಿಸಿಯೂಟ ನೌಕರರು ೬೦ ವರ್ಷದ ನಂತರ ಕೆಲಸದಿಂದ ಬಿಡುಗಡೆಗೊಳಿಸುವಾಗ ನಿವೃತ್ತಿ ವೇತನ ನೀಡಬೇಕು, ಬಜೆಟ್‌ನಲ್ಲಿ ನೌಕರರಿಗೆ ಹೆಚ್ಚಿಸಿರುವ ರೂ. ೧೦೦೦ ವೇತನವನ್ನು ೨೦೨೨ ಜನವರಿಯಿಂದ ಅನ್ವಯಿಸಿ ಜಾರಿ ಮಾಡುವಂತೆ ಆಗ್ರಹಿಸಿ ಅಕ್ಷರ ದಾಸೋಹ ಕೊಡಗು ಜಿಲ್ಲಾ ಸಮಿತಿ ಮತ್ತು ಸಿಐಟಿಯು ಸಂಘಟನೆ ವತಿಯಿಂದ ರಾಜ್ಯ ಪ್ರೌಢಶಿಕ್ಷಣ ಸಚಿವರಿಗೆ ಕಳಿಸುವಂತೆ ವೀರಾಜಪೇಟೆ ತಹಶೀಲ್ದಾರ್ ಡಾ. ಆರ್. ಯೋಗಾನಂದ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಅಕ್ಷರ ದಾಸೋಹ ನೌಕರರ ಜಿಲ್ಲಾ ಅಧ್ಯಕ್ಷೆ ಕೆ.ಎ. ಪ್ರಮಿಳಾ ಮಾತನಾಡಿ, ಶಾಲಾ ಅವಧಿಯ ನಂತರ ನರೇಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸ ನೀಡಿ ವೇತನ ನೀಡುವಂತಾಗಬೇಕು, ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು. ಪ್ರತಿ ತಿಂಗಳು ೫ನೇ ತಾರೀಕಿನೊಳಗೆ ವೇತನ ಪಾವತಿಸಬೇಕು. ಮಕ್ಕಳ ಅಪೌಷ್ಟಿಕತೆ ತಡೆ ಹಿಡಿಯಲು ಅನುಕೂಲವಾಗುವ ಮೊಟ್ಟೆ-ಬಾಳೆಹಣ್ಣನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕು ಹಾಗೂ ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಶಿಫಾರಸ್ಸಿನಂತೆ ರೂ. ೬೦೦೦ ಹಾಗೂ ೧೫,೦೦೦ ವೇತನವನ್ನು ಹೆಚ್ಚಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ತಹಶೀಲ್ದಾರ್‌ಗೆ ಮನವಿ ಸಲ್ಲಿಸುವ ಸಂದರ್ಭ ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ಅಕ್ಷರ ದಾಸೋಹ ತಾಲೂಕು ಅಧ್ಯಕ್ಷೆ ನ್ಯಾನ್ಸಿ, ಖಜಾಂಚಿ ಸಂಧ್ಯಾ ಇತರರು ಉಪಸ್ಥಿತರಿದ್ದರು.