ವೀರಾಜಪೇಟೆ, ಏ. ೨೫: ಕೊಡಗು ಹಿಂದೂ ಮಲೆಯಾಳಿ ಮಹಿಳಾ ಅಸೋಸಿಯೇಷನ್ ವೀರಾಜಪೇಟೆ ಅಸ್ತ್ತಿತ್ವಕ್ಕೆ ಬಂದು ೬ ತಿಂಗಳಾಗಿದ್ದು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹಿಂದೂ ಮಲೆಯಾಳಿ ಸಮಾಜ ಬಾಂಧವರನ್ನು ಒಗ್ಗೂಡಿಸುವ ಸಲುವಾಗಿ ಮೇ ೧ ರಂದು ತಾಯಂದಿರ ದಿನದಂದು ಹಿಂದೂ ಮಲೆಯಾಳಿ ತಾಯಂದಿರ ದಿನಾಚರಣೆಯನ್ನು ವೀರಾಜಪೇಟೆ ಮೀನುಪೇಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾ ಅಧ್ಯಕ್ಷೆ ಶೀಭಾ ಪೃತ್ವನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ೧ ರಂದು ನಡೆಯುವ ಕಾರ್ಯಕ್ರಮವನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ. ಸದಸ್ಯರುಗಳಾದ ಕದ್ದಣಿಯಂಡ ಹರೀಶ್ ಬೋಪಣ್ಣ, ಡಾ. ಮಂಥರ್‌ಗೌಡ, ಕೊಡಗು ಹಿಂದೂ ಮಲೆಯಾಳಿ ಸಂಘದ ಗೌರವ ಅಧ್ಯಕ್ಷ ರಮೇಶ್, ತಿರುವನಂತಪುರ ಅನಂತಪಧ್ಮನಾಭ ಸ್ವಾಮಿ ಕ್ಷೇತ್ರದ ಟ್ರಸ್ಟಿ ಪ್ರಸಾದ್ ಪಣಿಕರ್, ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ. ಜಿಲ್ಲಾಧ್ಯಕ್ಷ ಲೋಕೇಶ್, ಅಂರ‍್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಕಾರ್ಯದರ್ಶಿ ಎಂ.ಕೆ. ಪದ್ಮಲತಾ ಮಾತನಾಡಿ, ತಾ. ೩೦ ರಂದು ಅಪರಾಹ್ನ ೨ ಗಂಟೆಗೆ ಹಿಂದೂ ಮಲೆಯಾಳಿ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮೇ ೧ರಂದು ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೨೧ ಸಾಧಕರನ್ನು ಸನ್ಮಾನಿಸಲಾಗುವುದು. ಸಂಘದ ಸದಸ್ಯರಿಂದ ತಿರುವಾದರ ಕಳಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗೌರವ ಅಧ್ಯಕ್ಷೆ ರೀನಾ ರಾಜನ್, ಸಹ ಕಾರ್ಯದರ್ಶಿ ಪಿ.ಜೆ. ಪದ್ಮಾವತಿ, ಖಜಾಂಚಿ ಶ್ರೀಕಲಾ, ಸದಸ್ಯರಾದ ಶ್ರೀಜಾ ಬಾಬು, ಹೇಮಲತಾ ಉಪಸ್ಥಿತರಿದ್ದರು.