ಶನಿವಾರಸಂತೆ, ಏ. ೨೫: ಸಮೀಪದ ಗೋಪಾಲಪುರ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಮಹೋತ್ಸವ ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಜರುಗಿತು. ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್ ವರ್ಣ ಹಾಗೂ ಮೂಲ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ ಹಾಗೂ ಕಲಶಾರಾಧನೆ ಮಾಡಲಾಯಿತು. ಗಣಪತಿ, ನವಗ್ರಹ, ದುರ್ಗಾ ಹಾಗೂ ಮೃತ್ಯುಂಜಯ ಹೋಮ ನಡೆದು ಪೂರ್ಣಾಹುತಿ, ಮಹಾ ಮಂಗ ಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನೆರವೇರಿತು. ಮಧ್ಯಾಹ್ನ ಭಕ್ತಾದಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂಜೆ ನಡೆದ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾತ್ರಿ ಬನಶಂಕರಿ ಅಮ್ಮನವರಿಗೆ ವಿಶೇಷ ಪೂಜೆ, ಲಲಿತಾ ಸಹಸ್ರನಾಮಾರ್ಚನೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು. ರಾತ್ರಿ ಸುಗ್ಗಿ ಕುಣಿತ ಮತ್ತು ಸಿಡಿಮದ್ದು ಪ್ರದರ್ಶನ ಭಕ್ತರ ಮನರಂಜಿಸಿತು. ಬುಧವಾರ ಬೆಳಿಗ್ಗೆ ಬನಶಂಕರಿ ಅಮ್ಮನವರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ವಾದ್ಯ ಸಮೇತ ಗಂಗಾ ಪೂಜೆಗೆ ಕರೆತಂದು ಪಂಚಕಲಶಗಳೊAದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ದೇವಾಲಯಕ್ಕೆ ಕರೆತರಲಾಯಿತು. ನಂತರ ಕೆಂಡೋತ್ಸವ ನಡೆದು ಕುಂಕುಮಾರ್ಚನೆ, ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.