ಕುಶಾಲನಗರ, ಏ. ೨೩: ಎಲ್ಲೆಡೆ ಮೊದಲ ದಿನ ಪಿಯು ಪರೀಕ್ಷೆ ಸುಗಮವಾಗಿ ನಡೆದರೂ ಕುಶಾಲನಗರ ಪರೀಕ್ಷಾ ಕೇಂದ್ರದಲ್ಲಿ ಮಾತ್ರ ವಿದ್ಯಾರ್ಥಿನಿಯೊಬ್ಬಳಿಗೆ ಎಡವಟ್ಟಿನ ಪ್ರಶ್ನೆಪತ್ರಿಕೆ ಒಂದು ದೊರೆತು ಪೇಚಿಗೆ ಈಡಾದ ಪರಿಸ್ಥಿತಿ ಎದುರಾಗಿದೆ.

ಕುಶಾಲನಗರ ಕನ್ನಡ ಭಾರತಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವ್ಯವಹಾರ ಅಧ್ಯಯನ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದ ವಿದ್ಯಾರ್ಥಿನಿ ಈ ಪೇಚಿಗೆ ಸಿಲುಕಿದ್ದಾಳೆ.

ಕುಶಾಲನಗರ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ಥಳೀಯ ಕೆ.ಬಿ ಕಾಲೇಜು ಪರೀಕ್ಷಾ ಕೇಂದ್ರದ ನಾಲ್ಕನೇ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದು ಈಕೆಗೆ ದೊರಕಿದ ವ್ಯವಹಾರ ಅಧ್ಯಯನ ಪತ್ರಿಕೆಯ ಮುಖಪುಟ ಮತ್ತು ಕೊನೆ ಪುಟದಲ್ಲಿ ಮಾತ್ರ ಸಂಬAಧಿಸಿದ ಪಠ್ಯದ ಪ್ರಶ್ನೆಗಳು ಅಚ್ಚಾಗಿದ್ದವು. ಆದರೆ ಒಳಗಿನ ಪುಟಗಳಲ್ಲಿ ಮಾತ್ರ ‘ಲಾಜಿಕ್’ ಪಠ್ಯಕ್ಕೆ ಸಂಬAಧಿಸಿದ ಪ್ರಶ್ನೆಗಳು ಅಚ್ಚಾಗಿದ್ದವು ಎಂದು ತಿಳಿದುಬಂದಿದೆ.

ಬೆಳಗ್ಗೆ ೧೦.೧೫ ರಿಂದ ೧:೩೦ ತನಕ ಪರೀಕ್ಷಾ ಅವಧಿಯಲ್ಲಿ ಈ ಬಗ್ಗೆ ವಿದ್ಯಾರ್ಥಿನಿ ಪರೀಕ್ಷಾ ಮೇಲ್ವಿಚಾರಕರ ಗಮನಕ್ಕೆ ತರದೆ ಅದೇ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ಪರೀಕ್ಷಾ ಕೇಂದ್ರದಿAದ ಹೊರಬಂದಿರುವ ಬಗ್ಗೆ ತಿಳಿದುಬಂದಿದೆ.

ಪರೀಕ್ಷೆ ಮುಗಿದು ಕೊಠಡಿಯಿಂದ ಹೊರಬಂದು ನಂತರ ಮಾರ್ಗಮಧ್ಯೆ ತನ್ನ ಸಹಪಾಠಿಗಳೊಂದಿಗೆ ಪ್ರಶ್ನೆಪತ್ರಿಕೆ ಬಗ್ಗೆ ಪರಸ್ಪರ ಪರಿಶೀಲಿಸಿದ ಸಂದರ್ಭ ವಿದ್ಯಾರ್ಥಿನಿಗೆ ತನ್ನ ಪ್ರಶ್ನೆಪತ್ರಿಕೆಯಲ್ಲಿ ಮಾತ್ರ ಗೊಂದಲ ಉಂಟಾಗಿರುವುದು ಖಚಿತಗೊಂಡಿದೆ. ತಕ್ಷಣ ವಿದ್ಯಾರ್ಥಿನಿ ಕಾಲೇಜಿನ ಪರೀಕ್ಷಾ ಮುಖ್ಯಸ್ಥರೊಂದಿಗೆ ಈ ಬಗ್ಗೆ ತಿಳಿಸಿದ ವೇಳೆಗೆ ಅದಾಗಲೇ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡಿ ಬೆಂಗಳೂರಿಗೆ ರವಾನಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಪುರುಷೋತ್ತಮ್ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರಿಗೆ ಗಮನಕ್ಕೆ ತರುವ ಮೂಲಕ ಪರೀಕ್ಷಾ ಕೊಠಡಿಯಲ್ಲಿ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಮಾಹಿತಿ ತಿಳಿಯುವ ವೇಳೆಗೆ ಪರೀಕ್ಷೆ ಕಳೆದು ಅದಾಗಲೇ ಉತ್ತರ ಪತ್ರಿಕೆಗಳ ಬಂಡಲ್ ರವಾನೆ ಆಗಿತ್ತು ಎಂದು ತಿಳಿಸಿದ್ದಾರೆ. ಒಟ್ಟು ೧೩೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಈಕೆಗೆ ದೊರಕಿದ ಪ್ರಶ್ನೆ ಪತ್ರಿಕೆಯಲ್ಲಿ ಮಾತ್ರ ಈ ರೀತಿ ವ್ಯತ್ಯಯ ಉಂಟಾಗಿದೆ, ಪ್ರಶ್ನೆಪತ್ರಿಕೆ ಅಚ್ಚಾಗುವ ಸಂದರ್ಭ ಈ ಎಡವಟ್ಟು ಉಂಟಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ವಿಷಯವನ್ನು ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ. -ಚಂದ್ರ ಮೋಹನ್