ಮಡಿಕೇರಿ, ಏ.೨೩: ಲೆಕ್ಕ ಶೀರ್ಷಿಕೆ ೫೦-೫೪ ಹಾಗೂ ಲೋಕೋಪಯೋಗಿ ಇಲಾಖೆಯ ಕೆಲವೊಂದು ಶೀರ್ಷಿಕೆಯಡಿಯಲ್ಲಿ ಕಾಮಗಾರಿ ಮುಗಿಸಿ ವರ್ಷ ಕಳೆದರೂ ಇನ್ನೂ ಕೂಡ ಗುತ್ತಿಗೆದಾರರಿಗೆ ಬಿಲ್‌ಗಳು ಪಾವತಿಯಾಗಿಲ್ಲ. ಇದರಿಂದ ಗುತ್ತಿಗೆದಾರರು ಸಂಕಷ್ಟದಲ್ಲಿದ್ದು, ಆ ಹಣವನ್ನು ಸರ್ಕಾರದಿಂದ ತ್ವರಿತವಾಗಿ ಬಿಡುಗಡೆ ಮಾಡಿಸಲು ಶಾಸಕರುಗಳು ಪ್ರಯತ್ನಿಸಬೇಕೆಂದು ಮಡಿಕೇರಿ ತಾಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘ ಮನವಿ ಮಾಡಿದೆ.

ಸಂಘದ ಅಧ್ಯಕ್ಷ ರಾಜೀವ್ ಲೋಚನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರುಗಳು ಸಹಕಾರ ನೀಡುತ್ತಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಕೊಡಗು ಜಿಲ್ಲಾ ಪಂಚಾಯತ್ ವಿಭಾಗದಿಂದ ೪೧ ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ೭೦ ಕೋಟಿ ರೂ. ಹಣ ಗುತ್ತಿಗೆದಾರರಿಗೆ ಪಾವತಿಸಲು ಬಾಕಿಯಿದ್ದು, ಇದನ್ನು ಶಾಸಕರು ಬಿಡುಗಡೆ ಮಾಡಿಸಬೇಕು ಅಲ್ಲದೆ, ಮುಂದಿನ ದಿನಗಳಲ್ಲಿ ಹಣ ಮಂಜೂರಾಗದೆ ಯಾವುದೇ ಟೆಂಡರ್ ಹಾಗೂ ತುಂಡು ಗುತ್ತಿಗೆ ಕಾಮಗಾರಿಯನ್ನು ನೀಡದಂತೆ ಅಧಿಕಾರಿಗಳಿಗೆ ಸೂಚಿಸಬೇಕು. ಕೆಲವೊಂದು ತುರ್ತು ಪರಿಸ್ಥಿತಿಯ ಸಂದರ್ಭ ನಡೆಸಿರುವ ಮುಂಗಡ ಕಾಮಗಾರಿಗಳನ್ನು ಕ್ರಿಯಾಯೋಜನೆಯಡಿ ಸೇರಿಸಿ ಹಣ ಪಾವತಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಬೇಕು. ಈ ನಿಟ್ಟಿನಲ್ಲಿ ಶಾಸಕರುಗಳಿಗೆ ಸಂಘದಿAದ ಮನವಿ ಸಲ್ಲಿಸಲು ಸಭೆ ತೀರ್ಮಾನಿಸಿತು.

ಸಂಘದ ಕಾರ್ಯದರ್ಶಿ ಕೆ.ಬಿ. ಪೂಣಚ್ಚ ಸ್ವಾಗತಿಸಿ, ಉಪಾಧ್ಯಕ್ಷ ಸಿ.ಪಿ. ಮನು ಉತ್ತಪ್ಪ ವಂದಿಸಿದರು. ಸಭೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.