ನಾಪೋಕ್ಲು, ಏ. ೨೩: ಸಮೀಪದ ಕಕ್ಕಬ್ಬೆ ಪ್ರೌಢಶಾಲಾ ಮೈದಾನದಲ್ಲಿ ನಾಲಡಿ ಗ್ರಾಮದ ಪೊನ್ನೋಲತಂಡ ಕುಟುಂಬಸ್ಥರು ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ್ದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟಕ್ಕೆ ಗಾಳಿಯಲ್ಲಿ ಗುಂಡು ಹಾರಿಸುವದರ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರಾದ ಬಾಚಮಂಡ ರಾಜಾ ಪೂವಣ್ಣ ಹಾಗೂ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಕಲಿಯಂಡ ಸಂಪನ್ ಅಯ್ಯಪ್ಪ, ಮೊಟ್ಟ ಮೊದಲ ಬಾರಿ ಪೊನ್ನೋಲತಂಡ ಕುಟುಂಬಸ್ಥರು ಕೊಡವ ಹಗ್ಗಜಗ್ಗಾಟ ಕ್ರೀಡಾಕೂಟವನ್ನು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಹಾಕಿ ಪಂದ್ಯಾಟದAತೆ ಉನ್ನತ ಮಟ್ಟಕ್ಕೆ ಬೆಳೆಸಬೇಕು ಎಂದರು.

ಬಾಚಮAಡ ರಾಜಾ ಪೂವಣ್ಣ ಮಾತನಾಡಿ, ಕೊಡವ ಕುಟುಂಬಗಳ ನಡುವಿನ ಬಲಾಬಲಗಳನ್ನು ಪ್ರದರ್ಶಿಸಲು ಈ ಕ್ರೀಡಾಕೂಟ ಸಹಕಾರಿಯಾಗಲಿದೆ. ಅದರೊಂದಿಗೆ ಕುಟುಂಬಗಳ ನಡುವಿನ ಪರಸ್ಪರ ಸ್ನೇಹ, ಸಾಮರಸ್ಯಕ್ಕೂ ನಾಂದಿಯಾಗಲಿದೆ ಎಂದರು.

ಕಕ್ಕಬ್ಬೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಮಾತನಾಡಿ, ಹಾಕಿ ಕ್ರೀಡೆಯಂತೆ ಈ ಕ್ರೀಡೆಯೂ ಹೆಚ್ಚಿನ ಜನಮನ್ನಣೆ ಗಳಿಸಬೇಕು. ಹೆಚ್ಚು ಹೆಚ್ಚು ಕೊಡವ ಕುಟುಂಬಗಳು ಇದರಲ್ಲಿ ಭಾಗವಹಿಸುವದರ ಮೂಲಕ ದಾಖಲೆ ಸೃಷ್ಟಿಯಾಗಬೇಕು ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸದಸ್ಯ ಕೋಡಿಮಣಿಯಂಡ ಬೋಪಣ್ಣ, ದಾನಿಗಳಾದ ಚೋಳಂಡ ಲೀನಾ ಸೋಮಯ್ಯ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊನ್ನೋಲತಂಡ ಕುಟುಂಬದ ಅಧ್ಯಕ್ಷ ಮಿಟ್ಟು ಸೋಮಯ್ಯ ವಹಿಸಿದ್ದರು. ಪೊನ್ನೋಲತಂಡ ಕುಟುಂಬದ ಪಟ್ಟೇದಾರ ಸೋಮಣ್ಣ ಹಾಗೂ ಕುಟುಂಬ ಸದಸ್ಯರು ಹಾಜರಿದ್ದರು. ಪೊನ್ನೋಲತಂಡ ಪೂವಿ ಪ್ರಾರ್ಥನೆ, ಮಿಟ್ಟು ಸೋಮಯ್ಯ ಸ್ವಾಗತಿಸಿದರು.

ದಿ ತಾಮರ ಕೂರ್ಗ್ ಹಾಗೂ ನಾಲಡಿ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು.