ಹೆಬ್ಬಾಲೆ, ಏ. ೨೩ : ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಮಟ್ಟದ ವೀರಶೈವ ಲಿಂಗಾಯಿತ ದೊಡ್ಡವೀರ ರಾಜೇಂದ್ರ ಒಡೆಯರ್ ಕ್ರೀಡಾಕೂಟ ಹೆಬ್ಬಾಲೆಯ ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟ ಉದ್ಘಾಟಿಸಿದ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಬೇಕು. ಪ್ರತಿ ಮನೆಗಳಲ್ಲಿ ಕ್ರೀಡಾ ಸಾಧಕರನ್ನು ಬೆಳೆಸಬೇಕು ಎಂದರು.
ಮಹಿಳೆಯರ ಥ್ರೋಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಸಮುದಾಯದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿದೆ.
ಜನಾಂಗದಲ್ಲಿ ಸಂಘಟನೆ, ಪ್ರೀತಿ, ವಾತ್ಸಲ್ಯ ಬೆಳೆಸಲು ಹಾಗೂ ಆರೋಗ್ಯಕರ ಜೀವನ ನಡೆಸಲು ಕ್ರೀಡೆ ಸ್ಪೂರ್ತಿಯಾಗಲಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ, ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಮೊದಲಿಗೆ ಹೆಬ್ಬಾಲೆ ಬನಶಂಕರಿ ಅಮ್ಮನವರ ದೇವಸ್ಥಾನದಿಂದ ಬೈಕ್ ರ‍್ಯಾಲಿ ಮೂಲಕ ಕಾಲೇಜು ಮೈದಾನಕ್ಕೆ ಕ್ರೀಡಾಜ್ಯೋತಿ ತರಲಾಯಿತು.
ನಂತರ ಗುಂಪು ಆಟಗಳಾದ ಕ್ರಿಕೆಟ್, ಹಗ್ಗಜಗ್ಗಾಟ, ಥ್ರೋಬಾಲ್, ಶಟಲ್ ಬಾಲಕ ಬಾಲಕಿಯರಿಗೆ ವೈಯಕ್ತಿಕ ಸ್ಪರ್ಧೆಗಳಾದ ಕಾಳು ಹೆಕ್ಕುವುದು, ಕಪ್ಪೆ ಕುಪ್ಪಳಿಸುವುದು, ಓಟದ ಸ್ಪರ್ಧೆಗಳು ಮತ್ತಿತರ ಸ್ಪರ್ಧೆಗಳು, ಪುರುಷ ಮತ್ತು ಮಹಿಳೆಯರಿಗೆ ವೈಯಕ್ತಿಕ ಸ್ಪರ್ಧೆಗಳಾದ ನಿಧಾನ ಬೈಕ್ ಚಾಲನೆ, ಭಾರದ ಗುಂಡು ಎಸೆತ, ರಂಗೋಲಿ, ಓಟ ಮತ್ತಿತರ ಸ್ಪರ್ಧೆಗಳು ನಡೆಸಲಾಯಿತು. ತೀರ್ಪುಗಾರರಾಗಿ ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ನೇತೃತ್ವದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಬೋಜೇಗೌಡ, ನೀಲಪ್ಪ, ಆಶಾ, ಸಂತೋಷ್ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಮಹಾಸಭಾದ ಕೊಡಗು ಜಿಲ್ಲಾ ಸಮಿತಿ ಉಪಾಧ್ಯಕ್ಷ ಜಿ.ಎಂ. ಕಾಂತರಾಜು, ಎಸ್.ಎಸ್. ಸುರೇಶ್, ಪ್ರಧಾನ ಕಾರ್ಯದರ್ಶಿ ಶಾಂಭ ಶಿವಮೂರ್ತಿ, ಕೋಶಾಧ್ಯಕ್ಷ ಎಚ್.ಪಿ.ಉದಯಕುಮಾರ್, ಕ್ರೀಡಾ ಸಮಿತಿ ಅಧ್ಯಕ್ಷ ಮೋಕ್ಷಿಕ್ ರಾಜ್, ಕ್ರೀಡಾ ಸಂಯೋಜಕ ಆದರ್ಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಸಂದೀಪ್, ಸೋಮವಾರಪೇಟೆ ಅಧ್ಯಕ್ಷ ಹಾಲಪ್ಪ, ಕುಶಾಲನಗರ ತಾಲೂಕು ಅಧ್ಯಕ್ಷ ಎಚ್.ಎಂ. ಮಧುಸೂದನ್, ಮುಖಂಡರಾದ ಮಹಾದೇವಪ್ಪ, ಪಾರ್ವತಮ್ಮ ಕಾಳಿಂಗಪ್ಪ, ಕಮಲಾ, ಜಲಜಾಶೇಖರ್, ಕೆ.ಎಸ್. ಸೌಭಾಗ್ಯ ಇದ್ದರು.