ಬೇಗೂರಿಗೆ ಕ್ಯಾಂಪ್ ಸ್ಥಳಾಂತರ.!

ಗೋಣಿಕೊಪ್ಪಲು.ಏ.೨೨: ದ.ಕೊಡಗಿನ ಹುದಿಕೇರಿ ಹೋಬಳಿಯ ಬೇಗೂರು ಬಳಿಯಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು ಹಸುವಿನ ಕಾಲಿನ ಭಾಗಕ್ಕೆ ಗಂಭೀರವಾದ ಗಾಯ ವಾಗಿದೆ. ಹುದಿಕೇರಿ ಮುಕ್ಕಾಟಿ ಮನೆ ಬಯವಂಡ ಚಿಪ್ಪ ಕುಟ್ಟಪ್ಪ ಎಂಬವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ.

ಹುದಿಕೇರಿ ಕೊಡವ ಸಮಾಜದ ಹಿಂಭಾಗದ ರಸ್ತೆಯ ಸಮೀಪ ಹಸುವನ್ನು ಕಟ್ಟಿ ಹಾಕಿದ್ದ ವೇಳೆ ಸಂಜೆ ಐದು ಗಂಟೆಗೆ ಹುಲಿ ದಾಳಿ ನಡೆಸಿದೆ.

ಸುದ್ದಿ ತಿಳಿದ ಅರಣ್ಯ ಇಲಾಖೆಯ ಪೊನ್ನಂಪೇಟೆ ವಲಯದ ಆರ್.ಎಫ್.ಒ.ಅಶೋಕ್, ಫಾರೆಸ್ಟ್ ರ್ ದಿವಾಕರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪೊನ್ನಂಪೇಟೆ ಪಶುವೈದ್ಯರಿಂದ ಹಸುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಕಳೆದ ೨೪ ದಿನಗಳಿಂದ ಕುಟ್ಟಂದಿ ಬಳಿ ಹುಲಿ ಕಾರ್ಯಾಚರಣೆ ನಡೆಸುತ್ತಿದ್ದ ತಂಡ ಇದೀಗ ಬೇಗೂರು ಬಳಿಗೆ ತಮ್ಮ ಕ್ಯಾಂಪ್ ಅನ್ನು ಸ್ಥಳಾಂತರ ಮಾಡಿದ್ದು ಈ ಭಾಗದಲ್ಲಿ ಹುಲಿಯ ಕಾರ್ಯಾಚರಣೆ ಆರಂಭಗೊಳಿಸಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಈ ಭಾಗದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಾರ್ಯಾಚರಣೆಯ ತಂಡಕ್ಕೆ ಸಿಕ್ಕಿತ್ತು. ಹೀಗಾಗಿ ಕ್ಯಾಂಪ್ ಅನ್ನು ಈ ಭಾಗಕ್ಕೆ ಸ್ಥಳಾಂತರ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.