ವೀರಾಜಪೇಟೆ, ಏ. ೨೨: ಪೋಷಕರು ತಮ್ಮ ಮಕ್ಕಳಿಗೆ ಸಂಗೀತದ ಅಭ್ಯಾಸವನ್ನು ಮಾಡಿಸು ವಂತಾಗಬೇಕು ಎಂದು ಸ್ವರಾರ್ಣವ ಸಂಗೀತ ಶಾಲಾ ಮುಖ್ಯ ವ್ಯವಸ್ಥಾಪಕ ದಿಲಿಕುಮಾರ್ ಸಲಹೆ ನೀಡಿದರು.
ವೀರಾಜಪೇಟೆ ರಾಜರಾಜೇಶ್ವರಿ ಸಭಾಂಗಣದಲ್ಲಿ ನಡೆದ ಚೋಟ ಚಾಂಪ್ಸ್ ಗುರುಕುಲಮ್ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಪುಟ್ಟ ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು. ಪೋಷಕರು ತಮ್ಮ ಮಕ್ಕಳನ್ನು ಪ್ರೀತಿ-ವಾತ್ಸಲ್ಯದೊಂದಿಗೆ ಸಂಗೀತ, ನಾಟಕ, ನೃತ್ಯ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುವ ಮೂಲಕ ಉತ್ತಮ ಗುಣವಂತರಾಗು ವಂತೆ ಬೆಳೆಸಬೇಕು ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ವಿ. ಬಾಡಗ ಸ.ಹಿ. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಸಂತಿ ರಾಜಮ್ಮ ಮಾತನಾಡಿ, ಶಿಕ್ಷಣದಲ್ಲಿ ಉತ್ತಮ ಮೌಲ್ಯಗಳು ಅಗತ್ಯವಿದೆ. ಪ್ರತಿಯೊಬ್ಬರು ಗುರು-ಹಿರಿಯರಿಗೆ ಗೌರವ ನೀಡುವಂತಾಗಬೇಕು ಎಂದರು. ಶಾಲಾ ಪ್ರಾಂಶುಪಾಲೆ ವೀಣಾ ಅಕ್ಕಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಚೋಟ ಚಾಂಪ್ಸ್ ಗುರುಕುಲಮ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಧನುಕುಮಾರ್ ಮಾತನಾಡಿದರು. ಶಿಕ್ಷಕರಾದ ಪ್ರಕೃತಿ ಸ್ವಾಗತಿಸಿದರೆ, ಮುತ್ತಮ್ಮ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.