ಮಡಿಕೇರಿ, ಏ. ೨೧: ಮಡಿಕೇರಿ ಶ್ರೀ ವಿನಾಯಕ ಕೊಡವ ಕೇರಿ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕೊಡವ ಸಮಾಜದ ಸಭಾಂಗಣದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಕುಡುವಂಡ ಬಿ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಕೇರಿಯ ಚಟುವಟಿಕೆ - ಕಾರ್ಯಯೋಜನೆಗಳ ಕುರಿತಾಗಿ ಚರ್ಚೆ ನಡೆಯಿತು. ಅಧ್ಯಕ್ಷರು ಸಂಘದ ಚಟುವಟಿಕೆಗಳ ಬಗ್ಗೆ ವಿವರವಿತ್ತರು. ವಾರ್ಷಿಕ ವರದಿ ಹಾಗೂ ಸಂತೋಷ ಕೂಟದ ವರದಿಯನ್ನು ಕಾರ್ಯದರ್ಶಿ ಪೆಮ್ಮುಡಿಯಂಡ ಎಂ. ಉತ್ತಪ್ಪ, ಆಡಳಿತ ಮಂಡಳಿ ವರದಿಯನ್ನು ನಿರ್ದೇಶಕ ಬಲ್ಯಂಡ ವಿಜು ನಂಜಪ್ಪ ನೀಡಿದರು. ಮಲ್ಲೇಂಗಡ ರಚನ್ ಪೊನ್ನಪ್ಪ ಪ್ರಾರ್ಥಿಸಿ, ಕುಡುವಂಡ ಉತ್ತಪ್ಪ ಸ್ವಾಗತಿಸಿದರು. ಉಪಾಧ್ಯಕ್ಷೆ ಮಂಡೇಟಿರ ಡೇಝಿ ಮಂದಪ್ಪ ವಂದಿಸಿದರು.