ಗೋಣಿಕೊಪ್ಪಲು, ಏ. ೧೯: ಸಮಾಜ ಬಾಂಧವರು ತಮ್ಮ ಆದಾಯದ ಒಂದು ಪಾಲನ್ನು ಕಷ್ಟದಲ್ಲಿರುವ ಸಮುದಾಯಕ್ಕೆ ನೀಡುವ ಮೂಲಕ ಅವರ ಕಷ್ಟಗಳಲ್ಲಿ ಭಾಗಿಗಳಾಗುವಂತೆ ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷ ಕೆ.ವಿ. ವಿನೋದ್ ಸಲಹೆಯಿತ್ತರು

ಗೋಣಿಕೊಪ್ಪಲುವಿನ ಮಹಿಳಾ ಸಭಾಂಗಣದಲ್ಲಿ ವಿಶ್ವಕರ್ಮ ಸೇವಾ ಸಮಿತಿ ವತಿಯಿಂದ ಆಯೋಜನೆ ಗೊಂಡಿದ್ದ ೮ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸಮಿತಿಯು ಕಷ್ಟದಲ್ಲಿದ್ದ ಸದಸ್ಯರ ಮನೆಗಳಿಗೆ ಅಗತ್ಯ ಆಹಾರ ಕಿಟ್ ವಿತರಿಸಿ ಸಹಕರಿಸಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದೆ. ಸಮಿತಿಯೊಂದಿಗೆ ಸಮುದಾಯ ಭಾಂದವರು ಉತ್ತಮ ಬಾಂಧವ್ಯ ಇಟ್ಟುಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ಹೆಚ್.ಕೆ. ಜಗದೀಶ್ ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಸಮುದಾಯದಲ್ಲಿ ಉತ್ತಮ ಸೇವೆ ಸಲ್ಲಿಸಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಕ್ರೀಡಾಕೂಟವನ್ನು ಆಯೋಜಿಸಿ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎಂ.ಎನ್. ರಾಜನ್, ಕಾರ್ಯದರ್ಶಿ ಎ.ಎ. ರಾಘವ, ಸಹಕಾರ್ಯದರ್ಶಿ ಎ.ಎಸ್. ಅನಿಲ್ ಕುಮಾರ್, ಖಜಾಂಚಿ ವಿ. ರಾಜು, ಕೆ.ಕೆ. ರಾಜಗೋಪಾಲ, ಎ.ಎಸ್. ಸುರೇಂದ್ರ, ಸೇರಿದಂತೆ ನಿರ್ದೇಶಕರಾದ ಎಂ.ಆರ್. ರಾಜೀವ್, ಸುಕುಮಾರನ್, ಮೋಹನ್, ರಮೇಶ್, ಚಂದ್ರಶೇಖರ್, ಮಣಿಕಂಠ ಹಾಗೂ ಸುಂದರ್‌ರಾಜ್ ಉಪಸ್ಥಿತರಿದ್ದರು. ಸಮಿತಿಯ ಕಾರ್ಯ ದರ್ಶಿ ಎ.ಎ. ರಾಘವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೆ.ಕೆ. ಚಂದ್ರಶೇಖರ್ ವಂದಿಸಿದರು.