ವೀರಾಜಪೇಟೆ, ಏ. ೧೯: ಪಟ್ಟಣ ಪಂಚಾಯಿತಿಯಲ್ಲಿ ಉಪಾಧ್ಯಕ್ಷರಾಗಿದ್ದ ಹರ್ಷವರ್ಧನ್‌ರವರ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ವೀರಾಜಪೇಟೆ ನಗರ ಹಿಂದೂ ಮಲೆಯಾಳಿ ಅಸೋಸಿಯೇಶನ್ ವತಿಯಿಂದ ಹಣ್ಣು ಹಂಪಲು ವಿತರಿಸಲಾಯಿತು.

ಬಳಿಕ ಮಾತನಾಡಿದ ಹಿಂದೂ ಮಲೆಯಾಳಿ ಅಸೋಸಿಯೇಷನ್ ಅಧ್ಯಕ್ಷ ವಿನೂಪ್‌ಕುಮಾರ್, ಹರ್ಷವರ್ಧನ್ ಅವರು ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಸೇವಾ ಅವಧಿಯಲ್ಲಿ ಜನಾಂಗ ಮತ್ತು ಇತರ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಸ್ಮರಿಸಿದರು. ತುರ್ತು ಚಿಕಿತ್ಸಾ ಘಟಕ, ಮಕ್ಕಳ ವಾರ್ಡ್, ಮಹಿಳಾ ಮತ್ತು ಪುರುಷರ ವಾರ್ಡಗಳಲ್ಲಿ ದಾಖಲಾಗಿರುವ ಸುಮಾರು ೫೦ಕ್ಕಿಂತ ಹೆಚ್ಚು ಮಂದಿ ಒಳರೋಗಿಗಳಿಗೆ ಹಣ್ಣು ಹಂಪಲುಗಳಿರುವ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭ ಆಸ್ಪತ್ರೆಯ ವೈದ್ಯರುಗಳಾದ ಡಾ. ಶ್ರೀನಿವಾಸ್ ಮೂರ್ತಿ, ಡಾ. ಹೇಮಪ್ರಿಯ ಮತ್ತು ಡಾ. ಆನಂದ್ ವೈದ್ಯಕೀಯ ಸಹಾಯಕರಾದ ಲಲಿತ, ಸಂಸ್ಥೆಯ ಉಪಾಧ್ಯಕ್ಷ ದಿನೇಶ್ ನಂಬಿಯಾರ್, ಕಾರ್ಯದರ್ಶಿ ಸಾಜು, ಸಹ ಕಾರ್ಯದರ್ಶಿ ಉನ್ನಿ, ಕೋಶಾಧಿಕಾರಿ ರಾಜನ್, ಸದಸ್ಯರಾದ ಜಯೇಶ್, ಸುಮೇಶ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.