ಮಡಿಕೇರಿ, ಏ. ೧೮: ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ.ಎಸ್. ಈಶ್ವರಪ್ಪ ಅವರ ಬಂಧನಕ್ಕೆ ಒತ್ತಾಯಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಮೊದಲು ನಗರದ ಚೌಕಿ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿದ ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾರ್ಯಕರ್ತರು ಗಾಂಧಿ ಮೈದಾನದಲ್ಲಿ ಜಮಾವಣೆಗೊಂಡರು. ಮೆರವಣಿಗೆ ಸಂದರ್ಭ ಕೆ.ಎಸ್. ಈಶ್ವರಪ್ಪ ಹಾಗೂ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಈಶ್ವರಪ್ಪ ಮುಖವಾಡ ಧರಿಸಿದ ವ್ಯಕ್ತಿಯನ್ನು ಬೇಡಿ ಹಾಕಿ ಮೆರವಣಿಗೆ ನಡೆಸಲಾಯಿತು.

ಗಾಂಧಿ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ ದ್ರುವನಾರಾಯಣ್, ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ರಾಜ್ಯ ವ್ಯಾಪಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಇದಕ್ಕಾಗಿ ೯ ತಂಡವನ್ನು ಕೆಪಿಸಿಸಿ ರಚಿಸಿದೆ. ಸಮೀಕ್ಷೆಯೊಂದರಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿರುವುದು ಬಹಿರಂಗ ಗೊಂಡಿರುವುದು

(ಮೊದಲ ಪುಟದಿಂದ) ಆತಂಕಕಾರಿ ವಿಚಾರವಾಗಿದೆ. ಜಾಗತಿಕ ಮಟ್ಟದಲ್ಲಿ ರಾಜ್ಯಕ್ಕೆ ಕಪ್ಪುಮಸಿ ಬಳಿಯುವ ಕೆಲಸ ಬಿಜೆಪಿ ಮಾಡಿದೆ. ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಶಾಸಕರುಗಳನ್ನು ಖರೀದಿ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಭ್ರಷ್ಟಾಚಾರ, ಅಶ್ಲೀಲ ಚಿತ್ರ ವೀಕ್ಷಣೆ, ರಾಸಲೀಲೆಯಂತಹ ಪ್ರಕರಣಗಳಲ್ಲಿ ಬಿಜೆಪಿ ನಾಯಕರಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಇದೀಗ ನೇರ ಆರೋಪಕ್ಕೆ ಗುರಿಯಾಗಿರುವ ಈಶ್ವರಪ್ಪ ಅವರನ್ನು ಬಂಧಿಸದೆ ಸರಕಾರ ರಕ್ಷಣೆ ಮಾಡುತ್ತಿದೆ. ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಹೇಳಿಕೆ ಆಧರಿಸಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಪೊಲೀಸ್ ಇಲಾಖೆ ಕೂಡ ಮೂಕ ಪ್ರೇಕ್ಷಕರಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲ. ಬಿಜೆಪಿ ಇದೀಗ ಭ್ರಷ್ಟಾಚಾರ ಜನತಾ ಪಕ್ಷವಾಗಿ ಪರಿವರ್ತನೆಗೊಂಡಿದೆ. ದಿನದಿಂದ ದಿನಕ್ಕೆ ಭ್ರಷ್ಟಾಚಾರ ರಾಜ್ಯದಲ್ಲಿ ಹೆಚ್ಚಾಗುತ್ತಿರುವುದಕ್ಕೆ ಬಿಜೆಪಿ ನೇರ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ತಾಕತ್ತಿದ್ದರೆ ತಮ್ಮ ಶಾಸಕರ ಹಾಗೂ ಸಚಿವರ ಮೇಲೆ ಆದಾಯ ತೆರಿಗೆ ಇಲಾಖೆ ಮೂಲಕ ದಾಳಿ ನಡೆಸಲಿ ಎಂದು ಸವಾಲೆಸೆದರು.

ಭ್ರಷ್ಟಾಚಾರದೊಂದಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತೆ ಮಾಡಿದೆ. ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟಿದೆ. ಜಾತಿ, ಧರ್ಮದ ಹೆಸರಿನಲ್ಲಿ ದಳ್ಳುರಿ ನಡೆಸುತ್ತಿರುವ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದ ದ್ರುವನಾರಾಯಣ್, ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಸೂಕ್ತ ಪರಿಹಾರದ ಜೊತೆಗೆ ಸಂತೋಷ್ ಪತ್ನಿಗೆ ಸರಕಾರಿ ಉದ್ಯೋಗ ನೀಡಬೇಕು. ದೇಶದಲ್ಲಿ ಗುತ್ತಿಗೆದಾರರು ಸರಕಾರದ ವಿರುದ್ಧ ಆರೋಪ ಮಾಡಿದ ನಿದರ್ಶನವಿಲ್ಲ. ಇದು ಬಿಜೆಪಿ ಭ್ರಷ್ಟಾಚಾರವನ್ನು ಸಾಕ್ಷಿಕರಿಸುತ್ತದೆ ಎಂದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯ್ಡು ಮಾತನಾಡಿ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಗುತ್ತಿಗೆದಾರರ ಪಾತ್ರ ಅಪಾರವಾಗಿದೆ. ಆದರೆ, ಕಮಿಷನ್ ದಂಧೆಯಲ್ಲಿ ತೊಡಗಿಸಿಕೊಂಡಿರುವ ಸರಕಾರ ಕಿವಿ, ಬಾಯಿ ಇಲ್ಲದ ಸ್ಥಿತಿಯಲ್ಲಿದೆ. ಬಿಜೆಪಿ ಮತೀಯ ವಿಷಬೀಜ ಬಿತ್ತುವ ಕಾರ್ಖಾನೆಯಾಗಿದೆ ಎಂದು ದೂರಿದ ಅವರು, ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ೪೦% ಕಮಿಷನ್ ಸರಕಾರ ಅಮಾಯಕ ಗುತ್ತಿಗೆದಾರನನ್ನು ಬಲಿ ತೆಗೆದುಕೊಂಡಿದೆ. ಗುತ್ತಿಗೆದಾರರು ತಮ್ಮ ಹಣ ವ್ಯಯಿಸಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನೆರವಾಗಬೇಕಾದ ಸರಕಾರ ಅವರಿಂದ ಹಣ ಕಿತ್ತುಕೊಳ್ಳುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮಾತನಾಡಿ, ಜನಪರ ಸರಕಾರ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಇದೀಗ ಜನವಿರೋಧಿ ನೀತಿ ಮೂಲಕ ಜನರ ಸಮಸ್ಯೆಗಳನ್ನು ಹೆಚ್ಚು ಮಾಡುತ್ತಿದೆ. ಕರ್ನಾಟಕ ಸರಕಾರ ೪೦% ಕಮಿಷನ್ ಪಡೆಯುತ್ತದೆ ಎಂದು ಗುತ್ತಿಗೆದಾರರ ಸಂಘ ದೇಶದ ಪ್ರಧಾನಿ ಅವರ ಗಮನ ಸೆಳೆದರು ಕೇಂದ್ರ ಸರಕಾರ ಮೌನ ವಹಿಸಿರುವುದು ಖಂಡನೀಯ. ನ್ಯಾಯ ದೊರೆಯದೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಮಾನ್ಯ ಜನರು ಈ ರೀತಿ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ ಬಂಧಿಸಲಾಗುತಿತ್ತು. ಆದರೆ, ಈಶ್ವರಪ್ಪ ಅವರನ್ನು ಘಟನೆ ನಡೆದು ಹಲವು ದಿನ ಕಳೆದರು ಬಂಧಿಸದಿರಲು ಕಾರಣವೇನು? ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿಲ್ಲ. ಹೈಕಮಾಂಡ್ ಒತ್ತಾಯದಿಂದ ರಾಜೀನಾಮೆ ನೀಡಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆ ಬಳಿಕ ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅವರ ಮೂಲಕ ಸೂಕ್ತ ಕ್ರಮಕ್ಕೆ ಆಗಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದÀ ಚಂದ್ರಮೌಳಿ, ಟಿ.ಪಿ. ರಮೇಶ್, ಡಾ. ಮಂಥರ್ ಗೌಡ, ಮಾಜಿ ಎಂಎಲ್‌ಸಿ ಚೆಪ್ಪುಡೀರ ಅರುಣ್ ಮಾಚಯ್ಯ. ಜಿಲ್ಲಾ ವೀಕ್ಷಕಿ ಮಂಜುಳಾ ರಾಜು, ಜಿ.ಪಂ. ಮಾಜಿ ಅಧ್ಯಕ್ಷೆ ಚಂದ್ರಕಲಾ, ಯುವಘಟಕದ ಜಿಲ್ಲಾಧ್ಯಕ್ಷ ಮಿಥುನ್ ಗೌಡ, ಪಕ್ಷದ ಜಿಲ್ಲಾ ಉಸ್ತುವಾರಿಗಳಾದ ಹೇಮಶೆಟ್ಟಿ, ಪ್ರದೀಪ್ ಶೆಟ್ಟಿ, ವೆಂಕಪ್ಪ ಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.