ಪೊನ್ನಂಪೇಟೆ, ಏ.೧೮: ಮಂಗಳೂರು ವಿಶ್ವವಿದ್ಯಾನಿಲಯವು, ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಪದವಿ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೊಡವ ಭಾಷಾ ವಿಷಯದ ಬೋಧನೆಗೆ ಅನುಮತಿಯನ್ನು ನೀಡುವ ಮೂಲಕ ದ್ವಿತೀಯ ಭಾಷೆಯನ್ನಾಗಿ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಿದೆ.

(ಮೊದಲ ಪುಟದಿಂದ) ಈ ನಿಟ್ಟಿನಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಕೊಡವ ಭಾಷೆ ವಿಷಯದ ಬೋಧನೆಯನ್ನು ಈ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ತರಲಾಗಿದ್ದು, ಇದೇ ಮೊದಲ ಬಾರಿಗೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಥಮ ಬಿಸಿಎ ತರಗತಿಯ ೯ ವಿದ್ಯಾರ್ಥಿಗಳು ಹಾಗೂ ಪ್ರಥಮ ಬಿಬಿಎ ತರಗತಿಯ ೬ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೧೫ ವಿದ್ಯಾರ್ಥಿಗಳು ಕೊಡವ ಭಾಷಾ ವಿಷಯವನ್ನು ದ್ವಿತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಪರೀಕ್ಷೆಯನ್ನು ಬರೆದರು.

ಉಪನ್ಯಾಸಕಿಯರಾದ ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಹಾಗೂ ಎ.ಎಂ.ಧರ್ಮಶೀಲ ಅವರು ಕಾವೇರಿ ಕಾಲೇಜಿನಲ್ಲಿ ಕೊಡವ ಭಾಷಾ ಬೋಧನೆಯನ್ನು ಮಾಡುತ್ತಿದ್ದಾರೆ. ಕೊಡವ ಭಾಷಾ ವಿಷಯವನ್ನು ಕಾವೇರಿ ಕಾಲೇಜಿನಲ್ಲಿ ಅನುಷ್ಠಾನಕ್ಕೆ ತರುವಲ್ಲಿ ಕಾವೇರಿ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿ ಸಹಕಾರ ನೀಡಿದೆ ಎಂದು ಪ್ರಾಂಶುಪಾಲ ಮಾಳೇಟಿರ ಬಿ.ಕಾವೇರಪ್ಪ ತಿಳಿಸಿದ್ದಾರೆ.