ವೀರಾಜಪೇಟೆ, ಏ. ೧೫: ಅರಣ್ಯದ ಅಂಚಿನಿAದ ಬಂದ ಒಂಟಿ ಸಲಗ ಹಾಡಹಗಲೆ ವಾಹನದ ಮೇಲೆ ಧಾಳಿ ಮಾಡಲು ಮುಂದಾಗಿ ಮನೆಯ ಮಂದಿ ಭಯಭೀತರಾದ ಘಟನೆ ಕರಡ ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕು ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದ ಬಿ.ಎಸ್. ಸೋಮಪ್ಪ ಅವರ ಮನೆಯ ಮುಂದೆ ನಿಲುಗಡೆಗೊಳಿಸಿದ ಪಿಕ್‌ಅಪ್ ವಾಹನದ ಮೇಲೆ ಒಂಟಿ ಸಲಗ ಧಾಳಿ ನಡೆಸಿದೆ. ಸೋಮಪ್ಪ ಅವರು ಸಾಕಿರುವ ನಾಯಿಗಳಿಂದ ಮನೆಯ ಮಂದಿಗಳು ಕಾಡಾನೆ ಧಾಳಿಯಿಂದ ಕೂದಲೆಳೆ ಅಂತರದಿAದ ಪಾರಾಗಿದ್ದಾರೆ. ತಾ. ೧೫ರ ಬೆಳಿಗ್ಗೆ ಸುಮಾರು ೭ ಗಂಟೆಯ ಹೊತ್ತಿಗೆ ಸೋಮಪ್ಪ ಅವರು ಮನೆಯ ಮುಂದೆ ನಿಲುಗಡೆಗೊಳಿಸಿದ್ದ ವಾಹನಗಳನ್ನು ತೊಳೆಯಲು ಮುಂದಾಗಿದ್ದರು. ವಾಹನ ತೊಳೆಯುವ ಸಂದರ್ಭ ಏಕಾಏಕಿ ಒಂಟಿ ಸಲಗ ಒಂದು ತೋಟದ ಅಂಚಿನಿAದ ಮನೆಯ ಸನಿಹಕ್ಕೆ ಓಡಿ ಬರುತ್ತಿರುವುದು ಕಂಡು ಭಯಭೀತರಾಗಿ ಸೋಮಪ್ಪ ಮನೆ ಸೇರಿಕೊಂಡಿದ್ದಾರೆ. ಆದರೆ ಕಾಡಾನೆ ವಾಹನದ ಮೇಲೆ ದಾಳಿ ನಡೆಸಿ ದಾಂಧಲೆ ನಡೆಸಿದೆ. ಸಾಕು ನಾಯಿಗಳು ಸಲಗವನ್ನು ಕಂಡು ಬೊಗಳಿದಾಗ ಕಾಡಾನೆಯು ಹಿಂದಿರುಗಿ ಅರಣ್ಯದತ್ತ ಮರೆಯಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎA. ಪರಮೇಶ್ವರ್ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ಕೃಷಿ ಫಸಲುಗಳನ್ನು ನಾಶಪಡಿಸುತ್ತಿವೆ. ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಮನೆಯಿಂದ ಹೋಗದೆ ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಕೂಡಲೆ ಕಾಡಾನೆಗಳ ನಿಯಂತ್ರಣ ಮಾಡುವಂತೆಯು ಮತ್ತು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದರು.

- ಕಿಶೋರ್ ಕುಮಾರ್ ಶೆಟ್ಟಿ