ಮಡಿಕೇರಿ, ಏ.೧೫: ಸಮಾಜವನ್ನು ಗೌರವಿಸುವುದನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ತಿಳಿಸಿಕೊಡಬೇಕು. ಸಾಮಾಜಿಕ ಮೌಲ್ಯವನ್ನು ವಿದ್ಯಾರ್ಥಿ ಯಾಗಿರುವಾಗಲೇ ತಿಳಿ ಹೇಳಬೇಕು. ದೊಡ್ಡವರಾದ ಬಳಿಕ ಸಮಾಜಕ್ಕೆ ಕೊಡುಗೆಯಾಗುವ ನಿಟ್ಟಿನಲ್ಲಿ ಮಕ್ಕಳನ್ನು ಪೋಷಿಸಿ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಕರೆ ನೀಡಿದರು.

ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಸಂಸ್ಥೆಯ ವತಿಯಿಂದ ಆಯೋಜಿತ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಈ ಸಂದರ್ಭ ಮಾತನಾಡಿದರು.

ಮಕ್ಕಳಿಗೆ ಏನನ್ನು ಬೋಧಿಸುತ್ತೇವೆಯೋ ಅದನ್ನು ಮೊದಲು ತಾವು ಪಾಲಿಸಲು ಪೋಷಕರು ಮುಂದಾಗಬೇಕು. ಮಕ್ಕಳ ಫೋಷಣೆ ಅತ್ಯಂತ ಮಹತ್ವದ್ದು, ಇಂದಿನ ಮಕ್ಕಳು ಈ ನಿಟ್ಟಿನಲ್ಲಿ ಭಾಗ್ಯವಂತರು. ಉತ್ತಮ ಶಿಕ್ಷಣ ನೀಡಿಕೆಯನ್ನು ಪ್ರತಿಯೋರ್ವ ಪೋಷಕರು ತನ್ನ ಹೊಣೆ ಎಂದು ಭಾವಿಸಿದ್ದಾರೆ ಎಂದು ನುಡಿದ ಅಯ್ಯಪ್ಪ, ಪೋಷಕರು ಸ್ನೇಹಿತರಂತೆ ಮಕ್ಕಳೊಂದಿಗೆ ವರ್ತಿಸುವಂತೆ ಸಲಹೆ ಇತ್ತರು.

ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅಧ್ಯಕ್ಷ ಕೆ.ಎಸ್.ದೇವಯ್ಯ, ಕಾರ್ಯದರ್ಶಿ ಬಿ.ಎಸ್.ಪೂಣಚ್ಚ, ನಿರ್ದೇಶಕರು ಗಳಾದ ಗುರುದತ್, ನಿಯತ ದೇವಯ್ಯ, ಪ್ರಾಂಶುಪಾಲೆ ಕೆ.ಎಸ್.ಸುಮಿತ್ರಾ, ವ್ಯವಸ್ಥಾಪಕ ಪಿ.ರವಿ ಹಾಜರಿದ್ದರು.