ಪೊನ್ನಂಪೇಟೆ, ಏ.೧೫: ಹಾತೂರು ಪ್ರೌಢಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿರುವ ಒಕ್ಕಲಿಗ ಸುಗ್ಗಿ ಕ್ರೀಡೋತ್ಸವ ಆರಂಭಗೊAಡಿದ್ದು,

ಶಾಸಕ ಕೆ.ಜಿ.ಬೋಪಯ್ಯ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪರಸ್ಪರ ಸ್ನೇಹ ಸೌಹಾರ್ದತೆಯನ್ನು ಬೆಸೆಯುವ ಮೂಲಕ ಸಮಾಜವನ್ನು ಒಗ್ಗೂಡಿಸಲು ಕ್ರೀಡೆಗಳಿಂದ ಮಾತ್ರ ಸಾಧ್ಯ. ತಮ್ಮ ತನವನ್ನು ಉಳಿಸಿಕೊಂಡು ಒಗ್ಗಟ್ಟಿನಿಂದ ಬದುಕುವುದರ ಜೊತೆಗೆ, ನಮ್ಮ ಆಚಾರ-ವಿಚಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ನಂತರ ಬ್ಯಾಟಿಂಗ್ ಮಾಡುವ ಮೂಲಕ ಒಕ್ಕಲಿಗರ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಪಿ.ಲೋಹಿತ್ ಗೌಡ ಮಾತನಾಡಿ, ಪ್ರತಿವರ್ಷ ವಿವಿಧ ಕ್ರೀಡೆಗಳನ್ನು ನಡೆಸುವ ಮೂಲಕ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಒಕ್ಕಲಿಗ ಸಮುದಾಯವನ್ನು ಒಂದುಗೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದ್ದು, ಎಲ್ಲರೂ ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡು ಕ್ರೀಡಾಕೂಟದ ಯಶಸ್ವಿಗೆ ಸಹಕರಿಸುವಂತೆ ಕೋರಿದರು. ರಾಜ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಚೇತನ್, ಕೊಡಗು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್, ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಮಾತನಾಡಿದರು. ಕಾರ್ಯಕ್ರಮ ದಲ್ಲಿ ವೇದಿಕೆಯ ಉಪಾಧ್ಯಕ್ಷ ಡಾಲು, ಮಾಜಿ ಅಧ್ಯಕ್ಷ ವಿ.ಎನ್.ಮಹೇಶ್, ಒಕ್ಕಲಿಗ ಸಮುದಾಯದ ಮುಖಂಡ ಚಿಕ್ಕಣ್ಣ, ಗೋಣಿಕೊಪ್ಪಲು ಠಾಣಾಧಿಕಾರಿ ಸುಬ್ಬಯ್ಯ, ಭಾರತೀಯ ಸೇನೆಯ ಯೋಧ ಕೃಷ್ಣ ಕುಮಾರ್, ವಿವಿಧ ಗ್ರಾಮಗಳ ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.

ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾ ತಂಡದವರು ನಡೆಸಿಕೊಟ್ಟ ಕಂಸಾಳೆ ನೃತ್ಯ, ಡೊಳ್ಳು ಕುಣಿತ ಹಾಗೂ ವೀರಗಾಸೆ ನೃತ್ಯ ನೆರೆದಿದ್ದವರನ್ನು ರಂಜಿಸಿತು. ಹರಿಪ್ರಿಯ ಪ್ರಾರ್ಥಿಸಿದರು. ದಕ್ಷಿಣ ಕೊಡಗು ಒಕ್ಕಲಿಗ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸ್ವಾಗತಿಸಿ, ಖಜಾಂಚಿ ಕೆ.ಬಿ.ಪವನ್ ಕುಮಾರ್ ನಿರೂಪಿಸಿ ವಂದಿಸಿದರು.