ಸೋಮವಾರಪೇಟೆ, ಏ. ೧೦: ಇಲ್ಲಿನ ಟೀಂ ಎಬಿಡಿ ಕ್ರಿಕೆಟ್ ಕ್ಲಬ್ ವತಿಯಿಂದ ತಾ. ೧೫ರಿಂದ ಮೇ ೧೫ರವರೆಗೆ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಂದು ತಿಂಗಳ ಕಾಲ ಲೆದರ್‌ಬಾಲ್ ಕ್ರಿಕೆಟ್ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ತಂಡದ ನಾಯಕ ಎಸ್.ಐ. ಚೇತನ್ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯವಾಗಿ ಲೆದರ್‌ಬಾಲ್ ಕ್ರಿಕೆಟ್ ತರಬೇತಿ ಇಲ್ಲದೇ ಇರುವುದರಿಂದ ಹೆಚ್ಚಿನ ಕ್ರೀಡಾಪಟುಗಳು ಬೆಂಗಳೂರು, ಮೈಸೂರಿಗೆ ತೆರಳಬೇಕಿದೆ. ಆರ್ಥಿಕವಾಗಿ ಹಿಂದುಳಿದ ಮಂದಿಗೆ ಇದು ಕಷ್ಟಸಾಧ್ಯ. ಈ ಹಿನ್ನೆಲೆ ಹಲವಷ್ಟು ಕ್ರೀಡಾಪ್ರತಿಭೆಗಳು ತೆರೆಮರೆಯಲ್ಲಿ ಉಳಿಯುವಂತಾಗಿದೆ. ಹೀಗಾಗಿ ಸ್ಥಳೀಯವಾಗಿಯೇ ಕ್ರಿಕೆಟ್ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದರು.
ಆಸಕ್ತ ಕ್ರೀಡಾಪಟುಗಳಿಗೆ ನಮ್ಮ ಕ್ಲಬ್‌ನಿಂದ ಉಚಿತವಾಗಿ ತರಬೇತಿ ನೀಡಲಾಗುವುದು. ಮೈಸೂರಿನಿಂದ ತರಬೇತುದಾರರನ್ನು ಕರೆತರಲಾಗುವುದು. ತಾ. ೧೫ ರಿಂದ ಮೇ ೧೫ ರವರೆಗೆ ಪ್ರತಿದಿನ ಬೆಳಿಗ್ಗೆ ೬ ರಿಂದ ೮ ಗಂಟೆಯವರೆಗೆ ತರಬೇತಿ ನೀಡಲಾಗುವುದು. ೪ ವರ್ಷದಿಂದ ೨೦ ವರ್ಷದೊಳಗಿನ ಆಸಕ್ತ ಕ್ರೀಡಾಪಟುಗಳು ಶಿಬಿರದಲ್ಲಿ ಭಾಗವಹಿಸಿ, ತರಬೇತಿ ಪಡೆಯ ಬಹುದಾಗಿದೆ ಎಂದು ಚೇತನ್ ತಿಳಿಸಿದರು.
ಲೆದರ್‌ಬಾಲ್ ಕ್ರಿಕೆಟ್ ತರಬೇತಿ ಹಿನ್ನೆಲೆ ಈಗಾಗಲೇ ಕಾಂಕ್ರೀಟ್ ಸ್ಲಾö್ಯಬ್, ಮ್ಯಾಟ್, ನೆಟ್‌ಗಳನ್ನು ಅಳವಡಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸುವವರು ತಾ. ೧೫ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. (ಮೊ: ೯೭೪೩೫೭೭೭೮೧, ೮೯೦೪೮೯೮೨೯೦) ಕಡ್ಡಾಯವಾಗಿ ಬಿಳಿ ಜರ್ಸಿ ಧರಿಸಿ ಆಗಮಿಸಬೇಕು ಎಂದರು.
ಸ್ಥಳೀಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಮೂಲಕ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಟೀಮ್ ಎಬಿಡಿ ವತಿಯಿಂದ ಪ್ರಥಮವಾಗಿ ಉಚಿತ ತರಬೇತಿ ಶಿಬಿರ ಆಯೋಜಿಸ ಲಾಗಿದೆ. ಕ್ರಿಕೆಟ್‌ನೊಂದಿಗೆ ದೈಹಿಕ ಕ್ಷಮತೆಯನ್ನು ವೃದ್ಧಿಸಿಕೊಳ್ಳುವ ತರಬೇತಿಯೂ ಲಭಿಸಲಿದೆ. ಇದರಿಂದಾಗಿ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಚೇತನ್ ಅಭಿಪ್ರಾಯಿಸಿದರು.
ಗೋಷ್ಠಿಯಲ್ಲಿ ಕ್ಲಬ್‌ನ ಉಪಾಧ್ಯಕ್ಷ ಯತೀಶ್, ಖಜಾಂಚಿ ಪೃಥ್ವಿ, ತರಬೇತುದಾರ ವಿಕ್ರಂ ಸಾಗರ್ ಅವರುಗಳು ಉಪಸ್ಥಿತರಿದ್ದರು.