ಸಿದ್ದಾಪುರ, ಏ. ೧೦: ಮಾಲ್ದಾರೆ ಜನಪರ ಕ್ರೀಡಾ ಮತ್ತು ಕಲಾ ಯುವಜನ ಸಂಘ ಹಾಗೂ ವಾಸನ್ ಐ ಕೇರ್ ಸಹಯೋಗದೊಂದಿಗೆ ಎರಡನೇ ವರ್ಷದ ಉಚಿತ ನೇತ್ರ ತಪಾಸಣೆ ಹಾಗೂ ನೇತ್ರದಾನ ನೋಂದಣಿ ಶಿಬಿರ ಮಾಲ್ದಾರೆಯ ಸರಕಾರಿ ಶಾಲಾ ಆವರಣದಲ್ಲಿ ನಡೆಯಿತು. ನೇತ್ರದಾನ ನೋಂದಣಿ ಹಾಗೂ ನೇತ್ರ ತಪಾಸಣೆ ಶಿಬಿರವನ್ನು ವಾಸನ್ ಐ ಕೇರ್ ಆಸ್ಪತ್ರೆಯ ವೈದ್ಯರಾದ ಡಾ. ಎಲಂಗೋ ಉದ್ಘಾಟಿಸಿದರು.

ಮಾಲ್ದಾರೆ ವ್ಯಾಪ್ತಿಯ ಕೂಲಿ ಕಾರ್ಮಿಕರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಶಿಬಿರದ ಸದುಪಯೋಗ ಪಡಿಸಿಕೊಂಡರಲ್ಲದೆ ಸ್ವಯಂಪ್ರೇರಿತವಾಗಿ ನೇತ್ರದಾನಕ್ಕೆ ಹೆಸರನ್ನು ನೋಂದಾಯಿಸಿರುವುದು ವಿಶೇಷವಾಗಿತ್ತು.

ಈ ಸಂದರ್ಭ ಜನಪರ ಸಂಘದ ಅಧ್ಯಕ್ಷ ಆಂಟೋನಿ ಮಾತನಾಡಿ, ನಮ್ಮ ಸಂಘದ ವತಿಯಿಂದ ಇದು ಎರಡನೇ ವರ್ಷದ ಆರೋಗ್ಯ ತಪಾಸಣಾ ಶಿಬಿರವಾಗಿದೆ. ಸಾಮಾನ್ಯವಾಗಿ ಇಲ್ಲಿನ ಗ್ರಾಮಸ್ಥರು ಕಣ್ಣಿನ ತಪಾಸಣೆಗೆ ಮಡಿಕೇರಿ ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ತೆರಳಬೇಕಾದ ಪರಿಸ್ಥಿತಿಯನ್ನು ಅರಿತ ನಮ್ಮ ಸಂಘಟನೆಯು ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರಿಗಾಗಿ ಉಚಿತ ನೇತ್ರದಾನ ಶಿಬಿರವನ್ನು ಆಯೋಜಿಸಿದ್ದೇವೆ.

ಗ್ರಾಮದ ೧೫ ಮಂದಿ ಕಡು ಬಡವರಿಗೆ ಉಚಿತವಾಗಿ ಕನ್ನಡಕ ಹಾಗೂ ಕಣ್ಣಿನ ಶಸ್ತçಚಿಕಿತ್ಸೆಯನ್ನು ಮಾಡಿಕೊಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪ, ಸದಸ್ಯರಾದ ಕಿರಣ್, ಹನೀಫ, ಬಾವ ಮಾಲ್ದಾರೆ, ಶಿಹಾಬುದ್ದಿನ್ ತಂಙಳ್ ಇನ್ನಿತರರು ಹಾಜರಿದ್ದರು.