ಗೋಣಿಕೊಪ್ಪಲು, ಏ. ೮: ರೈತರು ಹಾಗೂ ಗ್ರಾಮಸ್ಥರೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವರು ಅನುಚಿತವಾಗಿ ವರ್ತಿಸಿದನ್ನು ಖಂಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಆತನಿಂದ ಕ್ಷಮೆ ಯಾಚಿಸಿದ ಘಟನೆ ನಡೆದಿದೆ.
ಕಳೆದ ಹತ್ತು ದಿನಗಳಿಂದ ಹುಲಿ ಕಾರ್ಯಾಚರಣೆ ನಡೆಸುತ್ತಿದ್ದ ಕ್ಯಾಂಪ್‌ನ ಬಳಿ ಬಿ. ಶೆಟ್ಟಿಗೇರಿ ಗ್ರಾಮದ ರೈತ ಸಂಘದ ಮುಖಂಡರುಗಳು ತೆರಳಿ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು.
‘‘ನಮ್ಮ ಭಾಗದಲ್ಲಿ ಹುಲಿಯ ಸಂಚಾರವಿದ್ದು ಈ ಭಾಗಕ್ಕೆ ಆಗಮಿಸುವಂತೆ ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಯಾರೂ ಕೂಡ ದೂರವಾಣಿ ಸ್ವೀಕರಿಸಿಲ್ಲ ಹಾಗಾಗಿ ಕ್ಯಾಂಪ್‌ನ ಬಳಿ ಬಂದಿದ್ದೇವೆ ಯಾರು ಇಲ್ಲಿಯ ಜವಾಬ್ದಾರಿ ನಿರ್ವಹಿಸುವವರು.?’’ ಎಂದು ಕುಟ್ಟಂದಿ ಭಾಗದ ರೈತರು ಅರಣ್ಯ ಸಿಬ್ಬಂದಿಗಳನ್ನು ಪ್ರಶ್ನಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವರು ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ಕೋಪಗೊಂಡು ಹುಲಿ ಕಾರ್ಯಾಚರಣೆಗೆ ಆಗಮಿಸಲು ಸಾಧ್ಯವಿಲ್ಲವೆಂದು ಹಠಕ್ಕೆ ಬಿದ್ದರು. ಇದರಿಂದ ಗ್ರಾಮಸ್ಥರ ಹಾಗೂ ಅರಣ್ಯ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.
ಮುಂಜಾನೆ ರೈತ ಸಂಘದ ಬಿ.ಶೆಟ್ಟಿಗೇರಿ ಭಾಗದ ಮುಖಂಡರಾದ ಕೊಲ್ಲೀರ ಬೋಪಣ್ಣ, ಉಮೇಶ್ ಕೇಚಮಯ್ಯ, ಚೇರಂಡ ಗಗನ್, ಸೇರಿದಂತೆ ಹಲವು ಮುಖಂಡರು ಈ ಬಗ್ಗೆ ಸಮಜಾಯಿಷಿಕೆ ಪಡೆಯಲು ಕಾರ್ಯಾಚರಣೆ ತಂಡ ತಂಗಿರುವ ಕ್ಯಾಂಪ್‌ನ ಬಳಿ ತೆರಳಿ ಅಧಿಕಾರಿಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರೊಂದಿಗೆ ಸಿಬ್ಬಂದಿಯು ಅನುಚಿತವಾಗಿ ನಡೆದುಕೊಂಡ ಬಗ್ಗೆ ಕ್ಷಮೆಯಾಚಿಸಬೇಕು ಇಲ್ಲದಿದ್ದಲ್ಲಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ಈ ವೇಳೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ರೈತ ಮುಖಂಡರನ್ನು ಸಮಾಧಾನಪಡಿಸಿ ರಾತ್ರಿಯ ವೇಳೆಯಲ್ಲಿ ಆದ ಘಟನೆಗೆ ಕ್ಷಮೆಯಾಚಿಸಿದರು. ನಂತರ ಗ್ರಾಮಸ್ಥರೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಆದ ಪ್ರಮಾದಕ್ಕೆ ಕ್ಷಮೆಯಾಚಿಸುವಲ್ಲಿ ಯಶಸ್ವಿಯಾದರು.
ಸ್ಥಳದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ನಂಬುಡುಮಾಡ ದಿವ್ಯ, ಚಂದುರ ಸನ್ನು, ಚೇರಂಡ ಜಗನ್, ಅಪ್ಪಂಡೇರAಡ ಬಾಬಿ, ನಿರನ್ ಮುಂತಾದವರು ಹಾಜರಿದ್ದರು.