ಕಣಿವೆ, ಏ. ೯: ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳು ಎದುರಾಗಬಹುದಾದ ಕಾಡಾನೆ ಗಳನ್ನು ಕಾಡಿಗಟ್ಟಲು ಮಣ್ಣಿನಿಂದ ಮಾಡಿದ ಗೋಲಿಯಾಕಾರದ ಮಣ್ಣಿನ ಉಂಡೆಗಳ ಮೂಲಕ ಗುರಿಯಿಟ್ಟು ಹೊಡೆವ ಬಿಲ್ಲು ಆಕರ್ಷಣೆಯಾಗಿದೆ.
ಮಣ್ಣನ್ನು ತಂದು ಪುಡಿ ಮಾಡಿ ಸೋಸಿದ ಬಳಿಕ ಸಣ್ಣದಾಗಿ ಗೋಲಿಯಾಕಾರದಲ್ಲಿ ಮಾಡಿ ಕೊಂಡು ಅವುಗಳನ್ನು ಬಿಸಿಲಲ್ಲಿ ಒಣಗಿಸುತ್ತಿದ್ದ ಚಿತ್ರಣ ಆನೆಕಾಡು ಗಿರಿಜನ ಹಾಡಿಯಲ್ಲಿ ಕಾಣಬಹುದು. ಗಾಜಿನ ಗೋಲಿಯಂತೆಯೇ ನುಣುಪಾದ ಮಾದರಿಯಲ್ಲಿ ಈ ಮಣ್ಣಿನ ಉಂಡೆಗಳನ್ನು ಮಾಡಿರುವ ಆದಿವಾಸಿಗಳ ಕೈಚಳಕ ನಿಜಕ್ಕೂ ಅಚ್ಚರಿ.
ಈ ಬಗ್ಗೆ ಮಾತನಾಡಿದ ಆದಿವಾಸಿ ಯುವಕ ಸುರೇಶ, ಕಾಡಾನೆಗಳು ಕಂಡರೆ ಅವುಗಳಿಗೆ ಬಿಲ್ಲಿನಿಂದ ಈ ಮಣ್ಣಿನ ಉಂಡೆಗಳನ್ನು ಬೀಸುತ್ತೇವೆ. ಆವಾಗ ಆ ಆನೆಗಳು ಮರಳುತ್ತವೆ. ಬಿಲ್ಲಿನಿಂದ ಗುರಿಯಿಟ್ಟು ಹೊಡೆವ ಈ ಒಣಗಿದ ಉಂಡೆಗಳು ದಪ್ಪ ಚರ್ಮದ ಆನೆಯ ಮೈಗೆ ಒಂದಿಷ್ಟು ಚುರುಕು ಮುಟ್ಟಿಸಬಲ್ಲದು ಎಂದು ಸುರೇಶ ಹೇಳುತ್ತಾನೆ. - ಕೆ.ಎಸ್. ಮೂರ್ತಿ