ಮಡಿಕೇರಿ, ಏ. ೯: ಕಾನಡ್ಕ ಕುಟುಂಬದ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ತಾ. ೨ರಂದು ಮರಗೋಡಿನಲ್ಲಿ ೯ನೇ ವರ್ಷದ ಆಟೋಟ ಸ್ಪರ್ಧೆಯನ್ನು ಕುಟುಂಬದ ಐನ್‌ಮನೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಐಯಂಡ್ರ ಪೂರ್ಣಿಮ ಶ್ರೀನಿವಾಸ್ ಅವರು ಉದ್ಘಾಟಿಸಿದರು. ಯುಗಾದಿ ಹಬ್ಬದ ಸಂದರ್ಭ ಇಂತಹ ಕಾರ್ಯ ಕ್ರಮಗಳನ್ನು ನಡೆಸುವುದರಿಂದ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಿದಂತಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ಪರಿಚನ ಶರತ್ ಉಪಸ್ಥಿತರಿದ್ದರು. ಕುಟುಂಬದಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸುವುದರಿಂದ ಒಗ್ಗಟ್ಟು, ಶಾಂತಿ, ಸಹನೆ, ಸಹಬಾಳ್ವೆಗೆ ಸಹಕಾರಿ ಯಾಗುತ್ತದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಟುಂಬದ ಹಿರಿಯರಾದ ಕಾನಡ್ಕ ನಂಜಪ್ಪ ವಹಿಸಿದ್ದರು. ಅಗಲಿದ ಸದಸ್ಯರಿಗೆ ಕುಟುಂಬದ ವತಿಯಿಂದ ಸಂತಾಪ ಸೂಚಿಸಲಾಯಿತು. ವೇದಿಕೆಯಲ್ಲಿ ಹಿರಿಯರಾದ ಕಾನಡ್ಕ ದಾಮೋದರ, ಕಾನಡ್ಕ ಉಲ್ಲಾಸ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಕಾನಡ್ಕ ಯಶೋದ, ಮಾನಸ, ವಾರಿಜ ಇವರುಗಳು ಪ್ರಾರ್ಥಿಸಿದರೆ, ಕಾನಡ್ಕ ಚರಣ್ ಸ್ವಾಗತಿಸಿದರು. ಕಾನಡ್ಕ ಹನೀಶ್ ನಿರೂಪಿಸಿದರೆ, ಕಾನಡ್ಕ ವಿಜಯಕುಮಾರ್ ವಂದಿಸಿದರು. ನಂತರ ಚಿಕ್ಕಮಕ್ಕಳಿಂದ ಹಿರಿಯರವರೆಗೆ ವಿವಿಧ ವಿಭಾಗದಲ್ಲಿ ಓಟದ ಸ್ಪರ್ಧೆಗಳನ್ನು ನಡೆಸಲಾಯಿತು. ದಂಪತಿಗಳಿಗೆ ಕೃಷ್ಣ - ರುಕ್ಮಿಣಿ ಓಟ, ರಾಮಸೀತೆ ಓಟ, ಬಾಲ್ ಬ್ಯಾಲೆನ್ಸ್ ಓಟ, ಹನುಮಂತನ ಓಟ, ತೆಂಗಿನ ಕಾಯಿಗೆ ಕಲ್ಲು ಹೊಡೆಯುವುದು, ಹಗ್ಗಜಗ್ಗಾಟ ಹೀಗೆ ೨೦ ವಿವಿಧ ಬಗೆಯ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಗಳಲ್ಲಿ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ಬಳಪದ ಮೋಹನ್ ಉಪಸ್ಥಿತರಿದ್ದರು. ಕುಟುಂಬಸ್ಥರು ಸೇರಿ ಇಂತಹ ಕಾರ್ಯಕ್ರಮ ನಡೆಸುವುದರಿಂದ ಪ್ರತಿಭೆಗಳಿಗೆ ಅವಕಾಶ ನೀಡಿದಂತಾ ಗುತ್ತದೆ ಹಾಗೂ ದೂರದೂರಿನಲ್ಲಿ ನೆಲೆಸಿರುವ ಕುಟುಂಬಸ್ಥರು ಒಟ್ಟಿಗೆ ಸೇರಿ ಸಂಭ್ರಮಿಸುವುದಕ್ಕೆ ಒಳ್ಳೆಯ ಅವಕಾಶ ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಕೆಂಜನ ರಂಜು ಅವರು ಉಪಸ್ಥಿತರಿದ್ದರು. ಕುಟುಂಬಸ್ಥರು ಇಂತಹ ಆಟೋಟ ಸ್ಪರ್ಧೆಗಳನ್ನು ನಡೆಸುವುದು ಒಂದು ಉತ್ತಮ ಬೆಳವಣಿಗೆಯಾಗಿದೆ ಹಾಗೂ ಇಂದಿನ ಯುವ ಜನಾಂಗ ಆಟೋಟ ಸ್ಪರ್ಧೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯ ಇಟ್ಟಣಿಕೆ ನಾಗೇಶ್ ವೇದಿಕೆಯಲ್ಲಿ ಉಪಸ್ಥಿತ ರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕುಟುಂಬದ ಹಿರಿಯರಾದ ನಂಜಪ್ಪ ವಹಿಸಿದ್ದರು.
ಸ್ಪರ್ಧೆಗಳಲ್ಲಿ ವಿಜೇತರಾದಂತಹ ಸ್ಪರ್ಧಿಗಳಿಗೆ ಕುಟುಂಬದ ವತಿಯಿಂದ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮದ ಮೊದಲಿಗೆ ಕಾನಡ್ಕ ಶ್ಯಾಮ್ ಸ್ವಾಗತಿಸಿದರೆ, ಕಾನಡ್ಕ ಹನೀಶ್ ನಿರೂಪಿಸಿ, ವಂದಿಸಿದರು.