ಸೋಮವಾರಪೇಟೆ, ಏ. ೫: ಕಾಫಿ ತೋಟದಲ್ಲಿ ಮರದ ಕೊಂಬೆಗಳನ್ನು ಕಟಾವು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕೆಳಗೆ ಬಿದ್ದು ಕೃಷಿಕರೋರ್ವರು ದುರ್ಮರಣ ಕ್ಕೀಡಾಗಿರುವ ಘಟನೆ ಸಮೀಪದ ಶಾಂತಳ್ಳಿ ಗ್ರಾಮದಲ್ಲಿ ನಡೆದಿದೆ.
ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ ಕೃಷಿಕ ಜಿ.ಎಸ್.ರಘುಕುಮಾರ್ (೫೧) ಎಂಬವರೇ ಸಾವನ್ನಪ್ಪಿದವರಾಗಿದ್ದು, ಪತ್ನಿ ಸವಿತಾ ಸೇರಿದಂತೆ ಈರ್ವರು ಮಕ್ಕಳನ್ನು ಅಗಲಿದ್ದಾರೆ.
ಇಂದು ಸಂಜೆ ತಮ್ಮ ಮನೆ ಸಮೀಪವಿರುವ ತಮ್ಮದೇ ತೋಟದಲ್ಲಿ ಮರಗಳ ಕೊಂಬೆಗಳನ್ನು ಕಟಾವು ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಕೆಳಬಿದ್ದು ಗಂಭೀರ ಸ್ಥಿತಿಗೆ ತಲುಪಿದ ರಘುಕುಮಾರ್ ಅವರನ್ನು ಸ್ಥಳೀಯರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.
ಮೃತರು ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದು, ತಾ.೬ ರಂದು (ಇಂದು) ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತ ರಘು ಅವರು ಕುಮಾರಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ ಕೆಲಸ ಮಾಡಿದ್ದು, ಹಲವಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಸೇರಿದಂತೆ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.