ಮಡಿಕೇರಿ, ಏ. ೫: ವೀರಾಜಪೇಟೆ ತಾಲೂಕಿನ ಪೆರಂಬಾಡಿ ಬಳಿ ಕರ್ನಾಟಕ - ಕೇರಳ ರಾಜ್ಯ ಹೆದ್ದಾರಿಯಲ್ಲಿ ಇಬ್ಬರು ವ್ಯಕ್ತಿಗಳು ಬ್ಯಾಗಿನಲ್ಲಿ ಮಣ್ಣುಮುಕ್ಕ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ವೀರಾಜಪೇಟೆ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಮತ್ತು ಹಾವನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಬೈಕನ್ನು (ಕೆ.ಎ. ೪೬ ಎಲ್ ೧೨೭೫) ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಾದ ಅರಸಿಕೆರೆಯ ಪುನಿತ್‌ಕುಮಾರ್ (೨೪), ಬೇಲೂರಿನ ಚಂದನ್ ಕುಮಾರ್ (೨೦) ಎಂಬವರುಗಳನ್ನು ಪೊನ್ನಂಪೇಟೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ೧೫ ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಮಹಾನಿರೀಕ್ಷಕ ಕೆ.ವಿ. ಶರತ್‌ಚಂದ್ರ ಅವರ ನಿರ್ದೇಶನದ ಮೇರೆಗೆ, ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪ್ರಭಾರ ಪೊಲೀಸ್ ಅಧೀಕ್ಷಕ ಎನ್.ಟಿ. ಶ್ರೀನಿವಾಸ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳದ ಪ್ರಭಾರ ಆರಕ್ಷಕ ಉಪನಿರೀಕ್ಷಕಿ ಸಿ.ಯು. ಸವಿ, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ. ಬೀನ, ಎಸ್.ಎಂ. ಯೋಗೇಶ್, ಪಿ.ಯು. ಮುನೀರ್, ಆರ್. ನಂದ ಕುಮಾರ್, ಮೋಹನ್ ಭಾಗವಹಿಸಿದ್ದರು.