ಮಡಿಕೇರಿ, ಏ.೫: ದೇಶದಲ್ಲಿ ತಲೆದೋರಿದ ಆಹಾರ ಸಮಸ್ಯೆ ಹೋಗಲಾಡಿಸಿ, ಹಸಿರು ಕ್ರಾಂತಿಗೆ ಕಾರಣರಾದ ಬಾಬು ಜಗಜೀವನ್ ರಾಂ ಅಂತಹ ಮಹಾನ್ ನಾಯಕರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ ೧೧೫ ನೇ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ.ಬಾಬು ಜಗಜೀವನ್ ರಾಂ ಅವರು ದೇಶಕ್ಕಾಗಿ ನೀಡಿದ ಕೊಡುಗೆಗಳು ಅಪಾರ. ಇಂತಹ ಮಹಾನ್ ನಾಯಕರ ಆದರ್ಶ, ಚಿಂತನೆಗಳು ಇಂದಿಗೂ ದಾರಿದೀಪವಾಗಿವೆ. ಶೋಷಿತರ, ದಮನಿತರ ಪರವಾಗಿ ಹೋರಾಟ ನಡೆಸಿದ ಮಾಜಿ ಉಪ ಪ್ರಧಾನಮಂತ್ರಿ ಬಾಬು ಜಗಜೀವನ್ ರಾಂ ಅವರು ಕೃಷಿ, ರಕ್ಷಣಾ ಸಚಿವರಾಗಿ ಸಲ್ಲಿಸಿದ ಸೇವೆ ಸ್ಮರಣೀಯವಾದದ್ದು ಎಂದು ಅವರು ಹೇಳಿದರು.
ಸರ್ವೋದಯ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಎಚ್.ಆರ್.ಗಿರೀಶ್ ಮಾತನಾಡಿ ತಮ್ಮ ಜೀವಿತಾವಧಿಯಲ್ಲಿ ಬಾಬು ಜಗಜೀವನ್ ರಾಂ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಹೊಸ ಅಲೆ ಎಬ್ಬಿಸಿದರು. ಕೃಷಿ ವಲಯಕ್ಕೆ ನೀಡಿದ ಕೊಡುಗೆ ಅಪಾರ. ಅಂತಹ ಧೀಮಂತ ನಾಯಕನ ಆದರ್ಶಗಳನ್ನು ಅಳವಡಿಸಿಕೊಂಡು ಪಾಲಿಸಬೇಕು ಎಂದು ಹೇಳಿದರು.
ಬಾಬು ಜಗಜೀವನ್ ರಾಂ ಅವರು ಶಿಕ್ಷಣವನ್ನೇ ಅಸ್ತçವನ್ನಾಗಿಸಿ ಉನ್ನತ ಸ್ಥಾನ ಪಡೆದ ಮಹಾನ್ ಚೇತನ.