*ಗೋಣಿಕೊಪ್ಪ, ಏ. ೫: ವಿಧಾನ ಪರಿಷತ್ ಸದಸ್ಯ ಹಾಗೂ ವನವಾಸಿ ಕಲ್ಯಾಣದ ಕಾರ್ಯದರ್ಶಿ ಶಾಂತರಾಮ್ ಸಿದ್ಧಿ ತಿತಿಮತಿ ವ್ಯಾಪ್ತಿಯ ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಬಗ್ಗೆ ಬುಡಕಟ್ಟು ಸಮುದಾಯದವರಿಗೆ ಭರವಸೆ ನೀಡಿದರು.

ಪೊನ್ನಂಪೇಟೆ ತಾಲೂಕಿನ ತಿತಿಮತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮರಪಾಲ, ಚೀನಿ ಹಡ್ಲು ಹಾಡಿಗೆ ಭೇಟಿನೀಡಿ ಹಾಡಿಯಲ್ಲಿ ವಾಸಿಸುತ್ತಿರುವ ವನವಾಸಿಗಳೊಂದಿಗೆ ಸಮಾಲೋಚನೆ ನಡೆಸಿದರು.

ನಂತರ ನಿರಂತರವಾಗಿ ಬುಡಕಟ್ಟು ಸಮುದಾಯದವರಿಗೆ ಅರಣ್ಯ ಇಲಾಖೆ ವತಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಮಾರ್ಗ ಕಂಡು ಕೊಳ್ಳಲು ಯೋಜನೆ ರೂಪಿಸುವುದಾಗಿ ತಿಳಿಸಿದರು. ಹಾಡಿ ನಿವಾಸಿಗಳು ತಮ್ಮ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ಪರಿಹಾರ ಒದಗಿಸಿ ಕೊಡುವಂತೆ ಮನವಿ ಪತ್ರವನ್ನು ಈ ಸಂದರ್ಭ ನೀಡಿದರು. ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ತಿತಿಮತಿ ಗ್ರಾ.ಪಂ. ಸದಸ್ಯ ಹಾಗೂ ವನವಾಸಿ ಕಲ್ಯಾಣದ ಸದಸ್ಯರಾದ ಎನ್.ಎನ್. ಅನೂಪ್‌ಕುಮಾರ್, ಉಪಾಧ್ಯಕ್ಷೆ ವಿಜಯ್ ಹಾಗೂ ಇತರರು ಇದ್ದರು.